ಮಂಗಳೂರು/ಉಡುಪಿ, ಸೆ 23 (DaijiworldNews/DB): ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಲ್ಲಿ ಪುರುಷರು ಅಂಗಿ-ಬನಿಯನ್ ತೆಗೆದು ದೇವರ ದರ್ಶನಕ್ಕೆ ಆಗಮಿಸಬೇಕೆನ್ನುವ ನಿಯಮವನ್ನು ಬದಲಾಯಿಸಬೇಕೆಂದು ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದೆ.
ದೇವಳಗಳಲ್ಲಿ ಅಂಗಿ-ಬನಿಯನ್ ತೆಗೆದು ದೇವರ ದರ್ಶನ ಪಡೆಯುವ ಪದ್ದತಿ ಸರಿಯಲ್ಲ. ಅಲ್ಲದೆ ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ. ಹಿಂದೂ ಧರ್ಮದ ಯಾವುದೇ ಧರ್ಮಗ್ರಂಥಗಳಲ್ಲಿಯೂ ಇದು ಉಲ್ಲೇಖವಾಗಿಲ್ಲ. ಆದರೆ ಯಾತ್ರಿಗಳಿಗೆ ಮುಜುಗರ ತರಿಸುವ ಇಂತಹ ನಿಯಮಗಳು ಹಲವು ವರ್ಷಗಳಿಂದ ಜಾರಿಯಲ್ಲಿರುವುದು ಯಾಕೆ ಎಂದು ಪ್ರಶ್ನಿಸಲಾಗಿದ್ದು, ಈ ಸಂಬಂಧ ಅಳವಡಿಸಿರುವ ಸೂಚಲಾ ಫಲವನ್ನು ತೆರವು ಮಾಡಬೇಕ ಎಂದು ಒಕ್ಕೂಟ ಆಗ್ರಹಿಸಿದೆ.
ಭಕ್ತರಲ್ಲಿ ಇಂತಹ ಆಚರಣೆಗಳು ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ. ಚರ್ಮರೋಗಿಗಳು ಅಂಗಿ ಕಳಚಿದರೆ ಅದು ಇತರರಿಗೂ ಹರಡುವ ಸಾಧ್ಯತೆ ಇಲ್ಲದಿಲ್ಲ. ದಿವ್ಯಾಂಗರಿಗೆ ಬಟ್ಟೆ ತೆಗೆದಿಟ್ಟು ದೇವರ ದರ್ಶನಕ್ಕೆ ಬರುವುದು ಕಷ್ಟ ಸಾಧ್ಯ. ಅಲ್ಲದೆ ಸಂವಿಧಾನದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ನಿಯಮವನ್ನು ಶೀಘ್ರ ಬದಲಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸರ್ಕಾರಿ ಆದೇಶವೂ ಈ ಕುರಿತು ಪ್ರಕಟವಾದದ್ದಿಲ್ಲ. ನಿಯಮದ ಕಡ್ಡಾಯ ಪಾಲನೆಗಾಗಿ ಕೆಲವರನ್ನು ಬೆತ್ತ ಹಿಡಿದು ನಿಲ್ಲಿಸುವುದನ್ನೂ ಅಗತ್ಯವಾಗಿ ಹಿಂಪಡೆಯಬೇಕು. ಅಲ್ಲದೆ ಮನವಿಗೆ ಸಂಬಂಧಿಸಿದಂತೆ ಮುಂದಿನ 15 ದಿನದೊಳಗೆ ನಮಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೋರಿದೆ.