ಉಳ್ಳಾಲ, ಸೆ 23 (DaijiworldNews/HR): ಉಳ್ಳಾಲ ಸಮೀಪದ ಮಾಡೂರು ಸೈಟ್ನಲ್ಲಿ ತಲವಾರು, ದೊಣ್ಣೆ ತೋರಿಸಿ ಜೀವಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತರನ್ನು ಬಂಟ್ವಾಳ ಕಸಬಾ ಗ್ರಾಮದ ಟಿಪ್ಪುನಗರ ದ ಜಾಬೀರ್ (24), ಫರಂಗಿಪೇಟೆ ಅಮ್ಮೆಮ್ಮಾರ್ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ ಮುಹಮ್ಮದ್ ಆರೀಫ್ ಯಾನೆ ಆಸಿಫ್(30) ಎಂದು ಗುರುತಿಸಲಾಗಿದ್ದು, ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.
ಸೆಪ್ಟಂಬರ್ 22ರಂದು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿ ಕಟ್ಟಿ ಹಾಕಲಾಗಿದ್ದ ಹೋರಿಯನ್ನು ನಸುಕಿನ 4.25 ಕ್ಕೆ ಇಬ್ಬರು ಆರೋಪಿಗಳು ಬಲಾತ್ಕಾರವಾಗಿ ಹಿಂಸಾತ್ಮಕವಾಗಿ ಎಳೆದೊಯ್ಯುವಾಗ ಜೋರಾಗಿ ಕೂಗುವುದನ್ನು ಗಮನಿಸಿ ಮಾಲೀಕ ಸತೀಶ್ ಅವರು ಓಡಿಬಂದಿದ್ದು, ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು, ಅಡ್ಡಿಪಡಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್ ತಂಡ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.