ಕಾರ್ಕಳ, ಸೆ 22 (DaijiworldNews/DB): ಮಾನವನಿಗೆ ಜೀವನವನ್ನು ಸದ್ವಿನಿಯೋಗ ಮಾಡುವ ಕುರಿತು ಮಾಹಿತಿ ಸಿಕ್ಕಿದರೆ ಹೆಚ್ಚು ಚೈತನ್ಯಶಾಲಿಯಾಗಿ ಬದುಕನ್ನು ನಡೆಸಬಹುದು ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್. ಚಂದ್ರಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಯೋಗ ಕೇಂದ್ರದ ವತಿಯಿಂದ ನಡೆಯುವ ವಾರ ಕಾಲದ ಯೋಗ ತರಬೇತಿ ಕಮ್ಮಟವನ್ನು ಅವರು ಉದ್ಘಾಟಿಸಿದರು.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆರೋಗ್ಯ ಮತ್ತು ಆಹಾರದ ಕುರಿತು ಸರಿಯಾದ ಮಾರ್ಗದರ್ಶಿ ಸೂತ್ರಗಳಿದ್ದವು. ಅದರ ತಿಳುವಳಿಕೆ ಜನಸಾಮಾನ್ಯರಿಗೂ ತಿಳಿಯದಿದ್ದರೂ ದೈಹಿಕ ಶ್ರಮವೇ ಅವರಿಗೆ ಎಲ್ಲಾ ಬಗೆಯ ಕ್ಷಮತೆಯನ್ನು ನೀಡುತ್ತಿತ್ತು. ರೈತಾಪಿವರ್ಗಕ್ಕೆ ದೈಹಿಕ ಶ್ರಮದ ಅನಿವಾರ್ಯತೆಯಿದ್ದುದರಿಂದ ಆರೋಗ್ಯದಲ್ಲಿ ಏರುಪೇರುಗಳು ಆಗುತ್ತಿರಲಿಲ್ಲ. ಇಂದು ದುಡಿಮೆ ಕಡಿಮೆಯಾಗಿದೆ. ದೇಹ ಶ್ರಮ ಬಹಳ ಕಡಿಮೆ. ಜೊತೆಗೆ ಕೆಟ್ಟ ಚಟಗಳು ನಮ್ಮನ್ನು ಆಳುತ್ತಿವೆ. ಹಾಗಾಗಿ ಅವುಗಳಿಂದ ದೂರಾಗಬೇಕಾದರೆ ನಾವುಗಳು ಹೆಚ್ಚು ಯೋಗ ಮುಂತಾದವುಗಳ ಕಡೆಗೆ ಗಮನ ಕೊಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನಸ್ಸು ಮತ್ತು ದೇಹ ಸದಾ ಸಂತುಲಿತವಾಗಿರಬೇಕೆಂದರೆ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಆಗ ಕೆಟ್ಟ ಚಟಗಳಿಗೆ ಬಲಿಯಾಗುವುದು ಕಡಿಮೆಯಾಗುತ್ತದೆ. ಜೀವನದಲ್ಲಿ ಒಳ್ಳೆಯ ಹವ್ಯಾಸಗಳು ಮೂಡಿಕೊಳ್ಳುತ್ತವೆ ಎಂದು ಹೇಳಿದರು.
ಯೋಗ ತರಬೇತುದಾರರಾಗಿ ಸಂಜಯಕುಮಾರ್, ನರೇಂದ್ರ ಕಾಮತ್ ಹಾಗೂ ಮಮತಾ ಗಣೇಶ್ ಪಾಲ್ಗೊಂಡಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಡಾ. ಮಂಜುನಾಥ್ ಭಟ್ಟ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿದರು. ಯೋಗ ಕೇಂದ್ರದ ಸಂಯೋಜಕ ಹಾಗೂ ಕಾಲೇಜಿನ ದೈಹಿಕ ನಿರ್ದೇಶಕ ನವೀನ್ಚಂದ್ರ ವಂದಿಸಿದರು. ಕನ್ನಡ ಉಪನ್ಯಾಸಕಿ ವನಿತಾ ಶೆಟ್ಟಿ ನಿರೂಪಿಸಿದರು.