ಉಡುಪಿ, ಸೆ 22 (DaijiworldNews/DB): ಇಂದು ಪಿಎಫ್ಐ ಕಚೇರಿ ಮೇಲೆ ನಡೆದ ಎನ್ಐಎ ದಾಳಿ ಖಂಡಿಸಿ ಉಡುಪಿ ನಗರದಲ್ಲಿ ರಸ್ತೆ ತಡೆ ನಡೆಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ರಸ್ತೆ ತಡೆದ ಕಾರಣ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕೋರ್ಟ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಎನ್ಐಎ ಗೋ ಬ್ಯಾಕ್" ಘೋಷಣೆ ಕೂಗಿದರು.
ಸಂಚಾರ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ಹಾಗೂ ಪೊಲೀಸರ ಅನುಮತಿ ಪಡೆಯದೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರಣ ರಸ್ತೆಯಿಂದ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಕಾರ್ಯಕರ್ತರು ಕದಲಲಿಲ್ಲ. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದರು. ಈ ವೇಳೆ ಹಲವು ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಇಂದು ಬೆಳಗ್ಗೆ ಮಂಗಳೂರು ಸೇರಿದಂತೆ ಹಲವೆಡೆ ಪಿಎಫ್ಐ ಮತ್ತು ಎಸ್ಡಿಪಿ.ಐ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು.