ಕಾರ್ಕಳ, ಸೆ 22 (DaijiworldNews/DB): ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಅನೆಕೆರೆ ಮಸೀದಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಮುತುವರ್ಜಿಯಿಂದ ಪ್ರತಿಭಟನೆ ಹಮ್ಮಿಕೊಂಡಾಗ ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ, ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷರು ಹೇಳಿದ್ದ ಸುಳ್ಳು ಲೋಕೋಪಯೋಗಿ ಇಲಾಖೆಯಿಂದ ಪಡೆದ ದಾಖಲೆಯಿಂದ ಬಹಿರಂಗಗೊಂಡಿದೆ. ಹಾಗಾಗಿ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಪುರಸಭಾ ಪ್ರತಿಪಕ್ಷ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.
ನಗರದ ಹೊಟೇಲ್ವೊಂದರಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಸಮಸ್ಯೆಯಾದಾಗ ಮನವಿ ನೀಡುವುದು ಮತ್ತು ಅದಕ್ಕೆ ಸರಿಯಾದ ಸ್ಪಂದನೆ ಸಿಗದಿದ್ದಾಗ ಪ್ರತಿಭಟಿಸುವುದು ಸರ್ವೇ ಸಾಮಾನ್ಯ. ಜವಾಬ್ದಾರಿ ಸ್ಥಾನದಲ್ಲಿರುವವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾಳ್ಮೆಯಿಂದ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಬೇಕೆ ಹೊರತು ಸುಳ್ಳು ಹೇಳಿ ದಿಕ್ಕು ತಪ್ಪಿಸಬಾರದು. ಒಂದು ವೇಳೆ ಟೆಂಡರ್ ಆಗಿದೆ ಎಂದಾದರೆ ಯಾರಿಗೆ ಆಗಿದೆ ಎಂದು ಹೇಳಬೇಕಾಗುತ್ತದೆ. ಆದರೆ ಇಲ್ಲಿ ಪ್ರಕ್ರಿಯೆ ನಡೆಯುತ್ತಿದೆಯೇ ಹೊರತು ಅಂತಿಮವಾಗಿಲ್ಲ ಎಂದು ತಿಳಿಸಿದರು.
ಒಂದು ವೇಳೆ ಸಾರ್ವಜನಿಕರ ಪ್ರತಿಭಟನೆ ನಾಟಕವೆಂದಾದರೆ ಕೆಲವು ಸಮಯಗಳ ಹಿಂದೆ ಇದೇ ರಸ್ತೆಯಲ್ಲಿ ನಿಮ್ಮದೇ ಪಕ್ಷದ ಮಾಜಿ ಪುರಸಭಾ ಸದಸ್ಯ ಮಾಡಿದ ಪ್ರತಿಭಟನೆ ನಾಟಕವೇ ಎಂದು ಅವರು ಪ್ರಶ್ನಿಸಿದರು.
ಕ್ಷೇತ್ರದ ಅಧ್ಯಕ್ಷರು ಬಗೆಹರಿಸಲಿ
ಕಳೆದ ನಾಲ್ಕು ವರ್ಷಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ನೂರಾರು ಕುಟುಂಬಗಳು ಮನೆ ಕಟ್ಟಲಾಗದೆ ಸಂಕಟ ಅನುಭವಿಸಿದ್ದಾರೆ. ಸಾಲ ಮಾಡಿ ಜಮೀನು ಖರೀದಿಸಿದವರು ಆತಂಕಕ್ಕೆ ಒಳಗಾಗಿದ್ದಾರೆ. ಇವರ ಪರ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತುಟಿಪಿಟಿಕಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎಂದವರು ಆಪಾದಿಸಿದರು.
ತಾತ್ಕಾಲಿಕ ಹಕ್ಕುಪತ್ರ ನೀಡಿ ಬಡವ ಮುಗ್ದರನ್ನು ವಂಚಿಸಲಾಗಿದೆ. ಒಂದು ವೇಳೆ ಅದೇ ಶಾಶ್ವತ ಹಕ್ಕುಪ್ರತವಾಗಿದ್ದರೆ ಈಗ ಯಾಕೆ ಹಕ್ಕು ಪತ್ರ ವಿತರಣೆಯಾಗುತ್ತಿಲ್ಲ? ಅದರ ಬಗ್ಗೆ ವಿವರಣೆ ನೀಡುವ ಜೊತೆಗೆ ಈ ಸಮಸ್ಯೆಯೂ ಅವರಿಂದಲೇ ಬಗೆಹರಿಯಲಿ ಎಂದು ಸವಾಲು ಹಾಕಿದರು.
ಪುರಸಭಾ ವ್ಯಾಪ್ತಿಯಲ್ಲಿ ನಡೆದ ಒಳಚರಂಡಿಯ ಕಳಪೆ ಕಾಮಗಾರಿಯಿಂದ ಪೇಟೆಯ ಜನರು ಸಂಕಟ ಪಡುತ್ತಿದ್ದಾಗ ಮೌನವಾಗಿದ್ದ ತಮಗೆ ಈಗ ಪ್ರತಿಭಟನೆಯ ಬಗ್ಗೆ ಮಾತನಾಡುವ ನೈತಿಕತೆಯ ಬಗೆ ಬಹಿರಂಗ ಪಡಿಸಬೇಕು ಎಂದು ಸವಾಲು ಎಸೆದಿದ್ದಾರೆ.
ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ್ ಹೆಗ್ಡೆ, ಸುನೀಲ್ ಭಂಡಾರಿ ಉಪಸ್ಥಿತರಿದ್ದರು.