ಕಾಸರಗೋಡು, ಸೆ 22 (DaijiworldNews/DB): ಕಾಸರಗೋಡಿನ ಮೂರು ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದ್ದು, ಪಿಎಫ್ಐ ಜಿಲ್ಲಾಧ್ಯಕ್ಷ ಸಿ.ಟಿ. ಸುಲೈಮಾನ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಕೇಂದ್ರ ಪಡೆ ಹಾಗೂ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ತ್ರಿಕ್ಕರಿಪುರದಲ್ಲಿರುವ ಜಿಲ್ಲಾಧ್ಯಕ್ಷ ಸಿ.ಟಿ. ಸುಲೈಮಾನ್ ಅವರ ಮನೆ, ಪೆರುಂಬಳ ಹಾಗೂ ನಾಯಮ್ಮರ ಮೂಲೆಯಲ್ಲಿರುವ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಸುಲೈಮಾನ್ ಅವರ ಮನೆಯಲ್ಲಿ ಮಹತ್ವದ ದಾಖಲೆಗಳು ಲಭಿಸಿಲ್ಲ ಎನ್ನಲಾಗಿದೆ.
ಜಿಲ್ಲಾ ಕಚೇರಿಯಿಂದ ಧ್ವಜ, ಬ್ಯಾನರ್, ಪುಸ್ತಕ, ಬ್ಯಾಡ್ಜ್ನ್ನು ಎನ್ ಐಎ ತಂಡವು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ದಾಳಿ ಸಂದರ್ಭದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಹೊಸಂಗಡಿ, ನಾಯಮ್ಮರ ಮೂಲೆ, ಪೆರುಂಬಳ, ತ್ರಿಕ್ಕರಿಪುರ, ಕಾಸರಗೋಡು ಮೊದಲಾದೆಡೆ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿದರು.
ನಾಳೆ ಕೇರಳದಲ್ಲಿ ಹರತಾಳಕ್ಕೆ ಕರೆ
ಎನ್ಎಐ ದಾಳಿ ಹಾಗೂ ಮುಖಂಡರ ಬಂಧನ ಪ್ರತಿಭಟಿಸಿ ಪಾಪ್ಯುಲರ್ ಫ್ರ೦ಟ್ ನಾಳೆ ( ಸೆಪ್ಟಂಬರ್ 23) ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ. ಬುಧವಾರ ಮಧ್ಯರಾತ್ರಿಯಿಂದ ಎನ್ಐಎ ಮಿಂಚಿನ ದಾಳಿ ನಡೆಸಿದ್ದು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮುಖಂಡರನ್ನು ಬಂಧಿಸಿದ್ದು, ಇದನ್ನು ಪ್ರತಿಭಟಿಸಿರುವ ಸಂಘಟನೆ ಕೇರಳ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ಬೆಳಗ್ಗೆ 6ರಿಂದ ಸಂಜೆ 6ರ ತನಕ ಹರತಾಳ ನಡೆಯಲಿದೆ ಎಂದು ರಾಜ್ಯ ಮುಖಂಡರು ತಿಳಿಸಿದ್ದಾರೆ.