ಬಂಟ್ವಾಳ, ಸೆ 22 (DaijiworldNews/DB): ಬೆಂಗಳೂರು ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ನಿವಾಸಿಯೋರ್ವನನ್ನು ವಿಟ್ಲ ಮತ್ತು ಬಂಟ್ವಾಳ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯ ಸಲುವಾಗಿ ಬೆಂಗಳೂರು ಪೋಲಿಸರಿಗೆ ಒಪ್ಪಿಸಿದ್ದಾರೆ.
ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಅವರ ಪುತ್ರ ಮಹಮ್ಮದ್ ತಪ್ಸೀರ್ ಬಂಧಿತ ಆರೋಪಿ. ಈತನನ್ನು ಬಂಟ್ವಾಳ ಮತ್ತು ವಿಟ್ಲ ಪೋಲೀಸರು ಇಂದು ಸುಮಾರು 11.35ರ ವೇಳೆಗೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ಬಂಟ್ವಾಳಕ್ಕೆ ಕರೆ ತಂದಿದ್ದಾರೆ. ಆ ಬಳಿಕ ರಾಜ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂಧಲೆ ನಡೆಸಿ ಅ ಬಳಿಕ ಪೋಲಿಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರ ತಂಡ ತನಿಖೆ ನಡೆಸುತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ತಪ್ಸೀರ್ ಕೂಡ ಭಾಗಿಯಾಗಿದ್ದ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.
ಇನ್ನು ಕೆ.ಜೆ.ಹಳ್ಳಿ , ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಆರಂಭದಲ್ಲಿ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕ ಇರಿಸಿಕೊಂಡಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ತಪ್ಸೀರ್ ಪಿಎಫ್ ಐಸಂಘಟನೆಯ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದ. ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು,ಬೋಳಂತೂರಿನಲ್ಲಿ ವಾಸವಾಗಿದ್ದ.
ದೊಡ್ಡಪ್ಪನ ಮನೆಗೆ ಹೋಗಿದ್ದ ಪೊಲೀಸರು
ರಾಜ್ಯ ಪೊಲೀಸರು ನೀಡಿದ ವಿಳಾಸ ಹುಡುಕಿ ಬಂಟ್ವಾಳ ಹಾಗೂ ವಿಟ್ಲ ಪೋಲಿಸರ ತಂಡ ಮುಂಜಾನೆ ಮೂರು ಗಂಟೆಗೆ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದಲ್ಲಿರುವ ಈತನ ದೊಡ್ಡಪ್ಪನ ಮನೆಗೆ ತಪ್ಸೀರ್ ಮನೆ ಎಂದು ತಪ್ಪಾಗಿ ಗ್ರಹಿಸಿ ತೆರಳಿದ್ದಾರೆ. ಬಳಿಕ ಆ ಮನೆ ಆತನ ದೊಡ್ಡಪ್ಪನದ್ದು ಎಂದು ಗೊತ್ತಾದ ಬಳಿಕ ಬೋಳಂತೂರಿನಲ್ಲಿರುವ ಆತನ ಮನೆಗೆ ದಾಳಿ ಮಾಡಲಾಯಿತು. ಅಗತ್ಯ ದಾಖಲೆಗಳ ಸಹಿತ ಆರೋಪಿಯ ಮೊಬೈಲ್, ಮನೆಯವರ ಮೊಬೈಲ್ಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋಬ್ಯಾಕ್ ಘೋಷಣೆ
ಬೆಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸರ ನಿರ್ದೇಶನದಂತೆ ಬಂಟ್ವಾಳ ಪೋಲೀಸರ ತಂಡ ಮನೆಗೆ ದಾಳಿ ನಡೆಸಿದಾಗ ಸ್ಥಳೀಯ ಸಂಘಟನೆಯ ಸುಮಾರು 250ಕ್ಕೂ ಅಧಿಕ ಮಂದಿ ಮನೆ ಮುಂದೆ ಜಮಾಯಿಸಿ ಎನ್ಐಎ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಆದರೆ ನಾವು ಬಂಟ್ವಾಳ ಪೋಲೀಸರು ಎನ್ಐಎ ಅಲ್ಲ ಎಂದು ಪೊಲೀಸರು ತಿಳಿಸಿದಾಗ, ಯಾಕೆ ಬಂದಿದ್ದು, ಯಾವ ವಿಚಾರಕ್ಕಾಗಿ ಬಂದಿದ್ದೀರೆಂದು ಜಮಾಯಿಸಿದ ಜನರು ಪೊಲೀಸರನ್ನು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಗದರಿಸಿ ಗುಂಪನ್ನು ಚದುರಿಸಿದರು.
ತಮ್ಮನ ಮದುವೆ ತಯಾರಿ
ಬಂಧಿತನಾದ ತಪ್ಸೀರ್ ಮನೆಯಲ್ಲಿ ಈತನ ತಮ್ಮನ ಮದುವೆ ಕಾರ್ಯಕ್ಕಾಗಿ ತಯಾರಿಗಳು ನಡೆಯುತ್ತಿತ್ತು. ಇದೇ ವೇಳೆ ಆತ ಬಂಧಿಸಲ್ಪಟ್ಟಿರುವುದಕ್ಕೆ ಕುಟುಂಬ ಸದಸ್ಯರು ದುಃಖ ವ್ಯಕ್ತಪಡಿಸಿದ್ದಾರೆ.