ಉಡುಪಿ,ಫೆ 10 (MSP): ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಅಸಹ್ಯಕರವಾಗಿದೆ. ಈ ಹಿಂದೆ ಜನಸಂಘ ಬಿಜೆಪಿಯ ಪ್ರಾಮಾಣಿಕತೆ ಎಲ್ಲಿಗೆ ಹೋಯ್ತು? ಹಿಂದುತ್ವದ ಹೋರಾಟ ಎಲ್ಲಿಗೆ ಹೋಗಿದೆ? ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಫೆ.10 ರ ಭಾನುವಾರ ಹಿಂದೂ ಜನಜಾಗೃತಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ ಪ್ರಮುಖ ವಕ್ತಾರರಾಗಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯದಾಟಗಳನ್ನು ನೋಡಿದ್ರೆ ಅಸಹ್ಯವಾಗುತ್ತದೆ.ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರೂ ಪಕ್ಷವನ್ನು ಧಿಕ್ಕರಿಸಿ ಹೊಸ ಪಕ್ಷ ಉದಯವಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿ ಇಂದು ಒಬ್ಬರು ಆಡಿಯೋ ಬಿಡುಗಡೆ ಮಾಡಿದ್ರೆ, ಮತ್ತೊಬ್ಬರು ನಾಳೆ ವಿಡಿಯೋ ಬಿಡುಗಡೆ ಮಾಡ್ತಾರಂತೆ. ಒಂದು ವೇಳೆ ವಿಡಿಯೋ ಇದೆ ಎಂದಾದರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ? ಅಥವಾ ಬಿಜೆಪಿಯವರದ್ದು ತಪ್ಪಿಲ್ಲ ಎನ್ನುವುದಾದರೆ ಇನ್ನೂ ಮಾನನಷ್ಟ ಮೊಕದ್ದಮೆ ಯಾಕೆ ಹಾಕಿಲ್ಲ? ಸತ್ಯ ನಿಮ್ಮ ಪರವಾಗಿದ್ರೆ ನ್ಯಾಯಾಲಯಕ್ಕೆ ಹೋಗಬಹುದಲ್ವಾ ಎಂದು ಬಿಜೆಪಿಗೆ ಮುತಾಲಿಕ್ ಸವಾಲು ಹಾಕಿದರು.
ಇದೇ ವೇಳೆ ಅವರು ಈ ಹಿಂದೆ ಜನಸಂಘ ಬಿಜೆಪಿಯಲ್ಲಿದ್ದ ಪ್ರಾಮಾಣಿಕತೆ ಎಲ್ಲಿಗೆ ಹೋಯ್ತು? ಆ ಪಕ್ಷದ ಸಿದ್ಧಾಂತವಾಗಿದ್ದ ಹಿಂದುತ್ವದ ಹೋರಾಟ ಎಲ್ಲಿಗೆ ಹೋಯ್ತು? ಎಂದು ಖಾರವಾಗಿ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು. ಆಪರೇಷನ್ ಮೂಲಕ ಕೋಟಿ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸುವ ಬಗ್ಗೆ ಕಿಡಿಕಾರಿದ ಮುತಾಲಿಕ್ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ದುಡ್ಡು ಅವರ ಅಪ್ಪನ ದುಡ್ಡೆ? ನಮ್ಮ ತೆರಿಗೆ ಹಣವನ್ನು ಈ ಪಕ್ಷಗಳು ರೆಸಾರ್ಟ್, ಡೀಲ್ ಗಾಗಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಮುತಾಲಿಕ್ ಅವರು , ಶ್ರೀರಾಮ ಸೇನೆ ಸಂಘಟನೆ ಅಥವಾ ಮುತಾಲಿಕ್ , ರಾಜಕೀಯದಿಂದ ಬಹುದೂರ ಸರಿದಾಗಿದೆ. ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನಬೆಂಬಲ ಇಲ್ಲ. ಇಲ್ಲಿ ಗೂಂಡಾಗಿರಿ ಮತ್ತು ಹಣವೇ ಎಲ್ಲದಕ್ಕೂ ಮಾನದಂಡವಾಗಿದೆ. ನಮ್ಮ ಬೆಂಬಲವನ್ನು ಯಾರಿಗೆ ನೀಡುತ್ತೇವೆ ಎನ್ನುವ ನಿರ್ಧಾರವನ್ನು ಇನ್ನು ಮಾಡಿಲ್ಲ. ಪ್ರಸ್ತುದ ಪ್ರಧಾನಿಯಾಗಿರುವ ಮೋದಿ ನೂರು ಶೇಕಡದಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಪರ್ಯಾಸವೆಂದರೆ ಬಿಜೆಪಿ ಪಕ್ಷ ಮಾತ್ರ ಇನ್ನೂ ಸುಧಾರಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.