ಉಡುಪಿ, ಸೆ 22 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಪರ್ಕಳದಿಂದ ಗುಡ್ಡೆ ಅಂಗಡಿವರೆಗಿನ ರಸ್ತೆ ತೀರ್ವವಾಗಿ ಹದಗೆಟ್ಟು ಆ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಅಸಾಧ್ಯವಾಗಿರುವುದರಿಂದ ದಿನನಿತ್ಯ ವಾಹನಗಳು ಅಪಘಾತವಾಗಿ ಜನರ ಪ್ರಾಣಕ್ಕೆ ಸಂಚಕಾರವಾಗಿರುವುದರಿಂದ ಆ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ವತಿಯಿಂದ ಅತ್ರಾಡಿ ಪೇಟೆಯಲ್ಲಿ ಇಂದು ಬೃಹತ್ ಪ್ರತಿಭಟನೆಯ ಆಯೋಜಿಸಲಾಯಿತು.
ಪ್ರತಿಭಟನೆಯ ಅಂಗವಾಗಿ ಅತ್ರಾಡಿ ಪೇಟೆಯ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿನಯ್ ಕುಮಾರ್ ಸೊರಕೆ, ಲೋಕಸಭಾ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿನ್ದ ಕೂಡಿದ್ದು ಎಚ್ಚೆತ್ತುಕೊಳ್ಳಬೇಕಾದ ಲೋಕಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು ಈಗ ಎಲ್ಲಿದ್ದಾರೆ ? ನಾವು ಹಿರಿಯಡ್ಕ ಪೊಲೀಸ್ ಸ್ಟೇಷನಲ್ಲಿ ಅವರನ್ನ ಹುಡುಕಿ ಕೊಡುವಂತೆ ಮನವಿ ಕೊಡುವ ಆಲೋಚನೆ ಮಾಡಿದ್ದೆವು ಎಂದು ವ್ಯಂಗ್ಯವಾಡಿದರು.
ಒಂದು ಹೆಣ ಬಿದ್ದರೆ ಅಲ್ಲಿಂದಲೇ ಫೋನ್ ಜಾತಿ ಧರ್ಮ ತಿಳಿದು ಹೆಣ ಸುಟ್ಟ ಮರು ದಿವಸನೇ ರಾಜಕೀಯ ಚದುರಂಗ ದಾಟುವ ಲೋಕಸಭಾ ಸದಸ್ಯರು, ಜನರಿಗೆ ಸಮಸ್ಯೆ ಆಗುವಾಗ ಈಗ ಎಲ್ಲಿದ್ದಾರೆ ಎಂದು ಶೋಭಾ ಕರಂದ್ಲಾಜೆಯವರನ್ನು ಟೀಕಿಸಿದರು.
ಇನ್ನು ಆದಷ್ಟು ಶೀಘ್ರವಾಗಿ ರಸ್ತೆ ದುರಸ್ಥಿ ಆಗಬೇಕು, ಒಂದು ವೇಳೆ ಕೆಲಸ ಆಗದಿದ್ದರೆ ಲೋಕಸಭಾ ಸದಸ್ಯರ ಕಚೇರಿಗೆ, ಶಾಸಕರ ಕಚೇರಿಗೆ ಮುತ್ತಿಗೆ ಹಾಕುವ ಕೆಲಸವನ್ನು ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಾಡಲಿದೆ ಎಂದು ಎಚ್ಚರಿಸಿದರು.
ಮಧ್ಯಮವರ್ಗದವರು ಬಡವರಾಗುತ್ತಿದ್ದರೆ. ಎಲ್ಲಾ ವಸ್ತುಗಳ ಜಿಎಸ್ ಟಿ ದರ ಹೇರಲಾಗುತ್ತಿದೆ. 70% ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಎಲ್ಲರನ್ನು ಹಿಂಡುತ್ತಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವ್ಯವಸ್ಥೆಯನ್ನು ಕಿತ್ತು ಹಾಕುವ ಹುನ್ನಾರ ಇಂದು ನಡಿತಿದೆ. ಆರ್ಥಿಕತೆ ದಿವಾಳಿಯಾಗಿ ಜೈಲಿಗೆ ಸೇರಬೇಕಾದ ಉದ್ಯಮಿ ಅದಾನಿ ಈಗ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸರಕಾರ ಯಾರ ಪರ ಇದೆ ಎಂದು ಗೊತ್ತಾಗುತ್ತಿದೆ ಎಂದರು.
ಚರಣ್ ವಿಠ್ಠಲ್ ಕುದಿ, ಅಧ್ಯಕ್ಷರು, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ, ಸಂತೋಷ್ ಶೆಟ್ಟಿ, ಗಣೇಶ್ ರಾಜ್ ಸರಳೆಬೆಟ್ಟು, ಗುರುದಾಸ್ ಭಂಡಾರಿ , ಸುಧೀರ್, ಲಕ್ಷ್ಮಿ ನಾರಾಯಣ್ ಪ್ರಭು, ಶಶಿಧರ್ ಜತ್ತನ್ನ, ಕಿರಣ್ ಕುಕ್ಕೆಹಳ್ಳಿ ಹಾಗು ವಲಯದ ಕಾರ್ಯಕ್ರತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.