ಶಿರ್ವ, ಸೆ 22 (DaijiworldNews/HR): ರಸ್ತೆ ದಾಟಲು ನಿಂತಿದ್ದ ತಂದೆ ಮಗನಿಗೆ ಬೈಕ್ ಢಿಕ್ಕಿ ಹೊಡೆದು ತಂದೆ ಮೃತಪಟ್ಟು ಮಗ ಗಂಭೀರ ಗಾಯಗೊಂಡ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಬಾಗಲಕೋಟೆ ಮೂಲದ ಶರಣಪ್ಪ ಬಾಲಪ್ಪ ಗಂಜಿಹಾಳ(40) ಮೃತಪಟ್ಟವರು. ಶ್ರವಣ ಕುಮಾರ(6) ಗಾಯಗೊಂಡವರು.
ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಶರಣಪ್ಪ ಅವರು ತನ್ನ ಪುತ್ರ ಶ್ರವಣಕುಮಾರನೊಂದಿಗೆ ದಿನಸಿ ತರಲು ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್ನ ಎದುರುಗಡೆ ರಸ್ತೆ ಬದಿಯಲ್ಲಿ ನಿಂತಿರುವಾಗ ಶಂಕರಪುರ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಢಿಕ್ಕಿ ಹೊಡೆದು ಬೈಕನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಇನ್ನು ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಸಾರ್ವಜನಿಕರು ಸೇರಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರ ಗಾಯಗೊಂಡು ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾದ ಶರಣಪ್ಪ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.