ಬಂಟ್ವಾಳ, ಸೆ 22 (DaijiworldNews/HR): ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಗಣ್ಯ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪದ್ಮನಾಭ ಸಾಮಾಂತ ಎಂದು ಗುರುತಿಸಲಾಗಿದೆ.
ರಾಜಕೀಯ ಗಣ್ಯ ವ್ಯಕ್ತಿಗಳ ಹೆಸರು ಬಳಕೆ ಮಾಡಿದ್ದಲ್ಲದೆ ವೈಯಕ್ತಿಕ ಹಾಗೂ ಇತರ ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಸಹಿತ ಸುಳ್ಳು ಬರವಣಿಗೆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಬಂಟ್ವಾಳ ತಹಶಿಲ್ದಾರ್ ಸ್ಮಿತಾರಾಮು ಅವರು ವಾಮದಪದವು ಪದ್ಮನಾಭ ಸಾಮಂತ ಎಂಬಾತನಿಗೆ ನ್ಯಾಯಾಂಗ ಬಂಧನದ ಅದೇಶ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುತ್ತಿದ್ದ ಎಂಬ ವಿಚಾರಕ್ಕೆ ಈತನ ಮೇಲೆ 5 ಕ್ಕೂ ಅಧಿಕ ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಈತ ಯಾವುದೇ ರೀತಿಯ ಸಮಾಜದ ಹಿತ ಕಾಯುವ ದೃಷ್ಟಿಯಿಂದ ಯಾವುದೇ ಪೋಸ್ಟ್ ಗಳನ್ನು ಹಾಕದಂತೆ ಗರಿಷ್ಠ ಮೊತ್ತದ ಮುಚ್ಚಳಿಕೆ ಬರೆಸುವಂತೆ ಕಳೆದ ಫೆಬ್ರವರಿ ತಿಂಗಳಲಿನಲ್ಲಿ ಪುಂಜಾಲಕಟ್ಟೆ ಎಸ್. ಐ.ಸುತೇಶ್ ತಹಶಿಲ್ದಾರ್ ಅವರಿಗೆ ಪಿ.ಎ.ಅರ್.ನೀಡಿದ್ದರು. ಆದರೆ ಆ ಬಳಿಕವೂ ಈತ ಇದೇ ಚಾಳಿಯನ್ನು ಮುಂದುವರಿಸಿದ್ದಲ್ಲದೆ, ತಹಶಿಲ್ದಾರ್ ಕೋರ್ಟುನಲ್ಲಿ 107 ಒಂದರ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಈತ ಮತ್ತೊಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಈತನಿಗೆ ಮುಚ್ಚಳಿಕೆ ಕೇಳಿದ್ದರು. ಆದರೆ ಈತ ಮುಚ್ಚಳಿಕೆ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ತಹಶಿಲ್ದಾರ್ ಅವರು ಈತನನ್ನು ಇಂದಿನಿಂದ 5 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡುವಂತೆ ಅದೇಶ ಹೊರಡಿಸಿದ್ದಾರೆ.