ಉಡುಪಿ, ಸೆ 21 (DaijiworldNews/SM): ಮಾಲೂರಿನಲ್ಲಿ ದಲಿತ ಬಾಲಕನಿಗೆ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ಸವರ್ಣೀಯರಿಂದ ಬಹಿಷ್ಕಾರ ವಿಚಾರ ಕೇಳಿ ನಮಗೆ ಬಹಳ ಖೇದವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮವಾಗಿದೆ. ಬಹಿಷ್ಕಾರ, ಶಿಕ್ಷೆ, ದಂಡವನ್ನು ಯಾವ ಧರ್ಮ ಗ್ರಂಥವು ಒಪ್ಪುವುದಿಲ್ಲ. ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತ ಕಾರ್ಯಕ್ರಮ ಆಗಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರು ಇಳಿಯಬಾರದು ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ತೀವ್ರ ಖೇದವಾಗಿದೆ. ಮಂಗಳೂರು ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್ ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡೋದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ ಎಂದು ಆಗ್ರಹಿಸಿದ್ದಾರೆ.
ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು. ದೇಶದ ಯಾವುದೇ ಭಾಗದಲ್ಲಿ ಉಗ್ರರ ಕಾರ್ಯದ ನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು. ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.