ಬಂಟ್ವಾಳ, ಸೆ 21 (DaijiworldNews/SM): ಶಿವಮೊಗ್ಗದಿಂದ ಬಂಟ್ವಾಳಕ್ಕೆ ಶಂಕಿತ ಉಗ್ರ ಮಾಝ್ ಅಹ್ಮದ್ ಕರೆ ತಂದ ಪೊಲೀಸರು ತಾಲೂಕಿನ ನಾವೂರ ಸಮೀಪದ ಸುಲ್ತಾನ್ ಕಟ್ಟೆ ಅಗ್ರಹಾರ ಬಳಿ ಮಹಜರು ನಡೆಸಿದ್ದಾರೆ.
ಮಹಜರು ವೇಳೆ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಜ್ವಾಡ್ ಮೂಲಕ ಪರಿಶೀಲನೆ ನಡೆಸಿದೆ. ಈ ಜಾಗಗಳಲ್ಲಿ ಬಾಂಬ್ ಬ್ಲಾಸ್ಟಿಂಗ್ ರಿಹರ್ಸಲ್ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಸ್ಥಳಮಹಜರು ನಡೆಸಿದೆ.
ಸರಪಾಡಿ ಗ್ರಾಮದ ಅಗ್ರಾಹರ, ಸಿಂಥಾಣಿಕಟ್ಟೆ, ನಾವೂರ, ಹಾಗೂ ಬಾಂಬ್ ರಿಹರ್ಸಲ್ ನಡೆಯುತ್ತಿದ್ದ ಮತ್ತ ಎಂಬ ಕಡೆಗೆ ಆರೋಪಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ.
ಸರಪಾಡಿ ಗ್ರಾಮದ ಮತ್ತ ಎಂಬ ಸ್ಥಳಕ್ಕೆ ಸಿಂಥಾಣಿಕಟ್ಟೆ ಎಂಬಲ್ಲಿಂದ ನದಿ ದಾಟಿ ಹೋಗಬೇಕು. ಮತ್ತ ಎಂಬ ಸ್ಥಳ ಹೆಚ್ಚಾಗಿ ದನ ಮೇಯುವ ಜಾಗ. ಅದು ದ್ವೀಪದಂತಿದ್ದು, ಮನುಷ್ಯರು ಅ ಜಾಗಕ್ಕೆ ಕಡಿಮೆ ಹೋಗುತ್ತಿದ್ದರು ಎನ್ನಲಾಗಿದೆ. ಅಂತಹ ಜನವಸತಿ ಇಲ್ಲದ ಸ್ಥಳದಲ್ಲಿ ಬಾಂಬ್ ರಿಹರ್ಸಲ್ ನಡೆಸಲಾಗುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ.