ಮಂಗಳೂರು, ಸೆ 21 (DaijiworldNews/DB): ಆರ್ಥಿಕ ಸ್ವಾವಲಂಬನೆ ಸಾಧಿಸಲು ಸೂಕ್ತವಾದ ಮಾಹಿತಿಯೊಂದಿಗೆ ಸ್ವ ಉದ್ಯೋಗ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಮಾಹಿತಿ ಶಿಬಿರವನ್ನು ನಗರದ ಬೆಂದೂರ್ವೆಲ್ನಲ್ಲಿರುವ ತೋಟಗಾರಿಕಾ ಇಲಾಖೆಯ ಸಭಾಂಗಣದಲ್ಲಿಂದು ಅವರು ಉದ್ಘಾಟಿಸಿದರು.
ನಮ್ಮ ಪರಿಸರದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಕೈಗೊಂಡು ವೈಯಕ್ತಿಕ ಆಧಾಯ ಹೆಚ್ಚು ಮಾಡಿಕೊಂಡು ಆರ್ಥಿಕವಾಗಿ ಸದೃಢತೆ ಸಾಧಿಸಬಹುದು. ಕೋವಿಡ್ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಆಗಿರುವ ಆರ್ಥಿಕ ಹೊಡೆತದಿಂದ ಕಷ್ಟ ನಷ್ಟ ಅನುಭವಿಸಿದವರಿಗೆ ವಿವಿಧ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈ ಗೊಳ್ಳಲು ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ಶಿಬಿರವನ್ನು ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಸ್ವ ಉದ್ಯೋಗ ಮಾಡಲು ಮೊದಲು ಆಸಕ್ತಿ ಮುಖ್ಯ. ಜೊತೆಗೆ ಆ ಕ್ಷೇತ್ರದ ಮಾಹಿತಿ, ಕೌಶಲ್ಯ, ಸರಕಾರದ ಸಹಾಯವನ್ನು ಪಡೆದು ಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬಹುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯ್ಕ್ , ದ.ಕ ಪಶು ಸಂಗೋಪನಾ ಇಲಾಖಾ ಉಪ ನಿರ್ದೇಶಕ ಡಾ. ಪ್ರಸನ್ನ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಉಪಸ್ಥಿತರಿದ್ದರು.
ಹವಾಮಾನ ಆಧಾರಿತ ಬೆಳೆ ವಿಮೆಯ ಪಾಲಿಸಿಯನ್ನು ರೈತರಿಗೆ ಮತ್ತು ತರಕಾರಿ ಗಿಡಗಳನ್ನು ಪತ್ರಕರ್ತರಿಗೆ ಸಾಂಕೇತಿಕವಾಗಿ ವಿತರಿಸಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಸ್ತಾವನೆಗೈದರು.
ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಜೇನು ಕೃಷಿ, ಅಣಬೆ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ , ಮೀನುಗಾರಿಕೆ ಬಗ್ಗೆ ಮಾಹಿತಿ ಶಿಬಿರ ನಡೆಯಿತು.