ಉಡುಪಿ, ಸೆ 21 (DaijiworldNews/MS): ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರನ್ನು ಶ್ರಿ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ನಾಯಕರ ಮನವೊಲಿಸುವಂತೆ ಒತ್ತಾಯ ಮಾಡಿದರು.
ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್ "ಈ ಬಾರಿಯ ರಾಜ್ಯ ಚುನಾವಣೆಯಲ್ಲಿ 25 ಸ್ಥಾನ ಹಿಂದೂ ಕಾರ್ಯಕರ್ತರಿಗೆ ನೀಡಬೇಕು. ಹಿಂದೂ ಕಾರ್ಯಕರ್ತರು, ಹೋರಾಟಗಾರರು , ಸಂಘಟಕರಿಗೆ ಅವಕಾಶ ನೀಡಬೇಕು. ಕಾರ್ಯಕರ್ತರು ಶಾಸಕರಾಗಿ ಆಯ್ಕೆಯಾದರೆ ಹಿಂದುತ್ವದ ಬಗ್ಗೆ ಧ್ವನಿ ಎತ್ತುತ್ತಾರೆ, ಹಿಂದುತ್ವಕ್ಕೆ ಆದ್ಯತೆ ನೀಡುತ್ತಾರೆ. ಬಿಜೆಪಿಯಲ್ಲಿ ಹಿಂದುತ್ವದ ಕಾಳಜಿಯ ಕೊರತೆ ಇದೆ. ಈ ತೊಂದರೆ ನಿವಾರಿಸಲು ಈ 25 ಮಂದಿಯಿಂದ ಸಾಧ್ಯ ಎಂಬುವುದು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ನನ್ನ ಆಗ್ರಹ. 25 ಮಂದಿ ಕಾರ್ಯಕರ್ತರಿಗೆ ಟಿಕೆಟ್ ಕೊಡಲೇಬೇಕು. ಬಿಜೆಪಿ ಟಿಕೆಟ್ ಕೇಳುವುದು ನಮ್ಮ ಹಕ್ಕು. ಬಿಜೆಪಿ ಪಕ್ಷದ ಸಲುವಾಗಿ ನಾವು ಬೆವರು ರಕ್ತ ಸುರಿಸಿದ್ದೇವೆ. ಕಾರ್ಯಕರ್ತರ ಈ ಬೇಡಿಕೆಯನ್ನು ಪಕ್ಷ ಪೂರೈಸಲೇಬೇಕು. ಈ ಬಗ್ಗೆ ಪೇಜಾವರ ಶ್ರೀಗಳ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ಶ್ರೀಗಳು ಸಕಾರಾತ್ಮಕ ಸ್ಪಂದಿಸಿದ್ದಾರೆ. ಬಿಜೆಪಿಗೆ ಹೊರತಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಬಿಜೆಪಿಯವರು ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಟಿಕೆಟ್ ಕೊಡದೆ ಇದ್ದರೆ ನಿಮ್ಮ ಹಣೆಬರಹ ಏನಿದೆಯೋ ಅನುಭವಿಸಿ ಎನ್ನುತ್ತೇವೆ. ಇತ್ತೀಚೆಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ರಾಜ್ಯದ ಎಲ್ಲರಿಗೂ ಅಸಮಾಧಾನ ಉಂಟಾಗಿದೆ. ಈ ಅಸಮಾಧಾನವನ್ನು ಸರಿಯಾದ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲು ನಾವು 25 ಮಂದಿಗೆ ಅವಕಾಶ ಕೇಳುತ್ತಿದ್ದೇವೆ. ನಿಮಗೆ ಅಧಿಕಾರ ನಡೆಸಲು ಬೇಕಾದಷ್ಟು ಸೀಟು ಗೆಲ್ಲಿಸಿ ಕೊಡುವ ಸಾಮರ್ಥ್ಯ ಹಿಂದೂ ಕಾರ್ಯಕರ್ತರಿಗೆ ಇದೆ. ಇದೇ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು, ಇಂತಹ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲ್ಲ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎಂದರು.
ಇನ್ನು ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕನಿಗೆ ಬಹಿಷ್ಕಾರ, ದಂಡ ವಿಚಾರ ಮಾತನಡಿದ ಅವರು " ದಲಿತ ಬಾಲಕನಿಗೆ ಹಿಂಸೆ ನೀಡಿರುವುದು, ದಂಡ ಹಾಕಿರುವುದು ಅಕ್ಷಮ್ಯ ಅಪರಾಧ. ದೇವರಿಗೆ ಮಡಿ ಮೈಲಿಗೆ ಇರೋದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದ ಬಳಿಕವೂ ದಲಿತರಿಗೆ ಈ ರೀತಿ ಕ್ರೌರ್ಯ ಹಿಂಸೆ ನೀಡುವುದು ಸರಿಯಲ್ಲ. ದಲಿತ ಬಾಲಕನಿಗೆ ದಂಡ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷಿಸಬೇಕು. ಇನ್ನು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು.ಶ್ರೀರಾಮ ಸೇನೆಯ ಕಾರ್ಯಕರ್ತರು ಆ ಗ್ರಾಮಕ್ಕೆ ಹೋಗುತ್ತಾರೆ. ದಂಡ ಹಾಕಿದವರ ವಿರುದ್ಧ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ಬೆಂಗಳೂರಿಗೆ ತೆರಳಿದ ಬಳಿಕ ನಾನು ಕೂಡ ಸ್ಥಳಕ್ಕೆ ಭೇಟಿ ನೀಡುತ್ತೇನೆ. ದಂಡ ಹಾಕಿದವರು ಕ್ಷಮೆ ಕೇಳಬೇಕು ಮತ್ತು ದಂಡದ ಹಣ ವಾಪಾಸು ನೀಡಬೇಕು" ಎಂದು ಆಗ್ರಹಿಸಿದರು.
"ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ನಾನು ಪೇಜಾವರ ಶ್ರೀಗಳೊಂದಿಗೆ ಮಾತನಾಡಿದ್ದೇನೆ. ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ರೌಡಿ ಶೀಟ್, ಕೇಸುಗಳು, ಗುಂಡಾ ಆಕ್ಟ್ ತೆರವು ಮಾಡಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷ ಕಳೆಯಿತು. ಕಳೆದ 10 ವರ್ಷಗಳಿಂದ ಹಿಂದುತ್ವದ ಕಾರ್ಯಕರ್ತರು ಕೋರ್ಟ್ ಅಲೆಯುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ನೋವನ್ನು ಪೇಜಾವರ ಶ್ರೀಗಳ ಗಮನಕ್ಕೆ ತಂದಿದ್ದೇನೆ" ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಶಿವಮೊಗ್ಗ ಶಂಕಿತ ಉಗ್ರರ ಬಂಧನ ವಿಚಾರ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್ "ಯಾಸೀನ್ ಭಟ್ಕಳ್ ಶಿವಮೊಗ್ಗಕ್ಕೆ ಬಂದು ಹೋದ ಬಗ್ಗೆ ಆರು ವರ್ಷದ ಹಿಂದೇನೆ ನಾನು ದಾಖಲೆ ಕೊಟ್ಟಿದ್ದೆ. ಇದೇ ಬಿಜೆಪಿ ಸರಕಾರ ಅದನ್ನು ನಿರ್ಲಕ್ಷ ಮಾಡಿತ್ತು. ಇನ್ನೊಮ್ಮೆ ದಾಖಲೆ ಸಹಿತ ನಾನು ಸುದ್ದಿಗೋಷ್ಠಿ ಮಾಡುತ್ತೇನೆ. ಅಂದು ನಾನು ಮಾಡಿದ ಆರೋಪಕ್ಕೂ ಈಗಿನ ಘಟನೆಗೂ ಏನು ಸಂಬಂಧವಿದೆ ಎಂದು ಬಹಿರಂಗಪಡಿಸುತ್ತೇನೆ. ಗೃಹ ಸಚಿವರನ್ನು ಭೇಟಿಯಾಗಿ ಅವರ ನಿರ್ಲಕ್ಷದ ಬಗ್ಗೆ ಗಮನ ಸೆಳೆಯುತ್ತೇನೆ" ಎಂದರು.