ಕುಂದಾಪುರ, ಸೆ 21 (DaijiworldNews/MS): ಕೆಲವು ದಿನಗಳ ಹಿಂದೆ ಸತ್ತ ತಿಮಿಂಗಲವೊಂದರ ಶವ ತ್ರಾಸಿ- ಮರವಂತೆ ಕಡಲತೀರದಲ್ಲಿ ಹೆದ್ದಾರಿ ಬದಿಯ ದಡದಲ್ಲಿ ಬಿದ್ದಿದೆ. ತಿಮಿಂಗಿಲ ಕೊಳೆತು ನಾರುತ್ತಿದ್ದರೂ ಇದುವರೆಗೆ ಪ್ರವಾಸೋದ್ಯಮ ಇಲಾಖೆಯಾಗಲಿ ಮೀನುಗಾರಿಕಾ ಇಲಾಖೆಯಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲದಿರುವುದು ಹೆದ್ದಾರಿ ಪ್ರಯಾಣಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳವಾರ ತಡರಾತ್ರಿ ಸುಮಾರು 500 ಕೆಜಿ ತೂಕದ ತಿಮಿಂಗಿಲದ ಶವ ತ್ರಾಸಿ - ಮರವಂತೆ ಬೀಚಿನ ದಡದಲ್ಲಿ ತೇಲಿ ಬಂದು ದಡಕ್ಕೆ ಅಪ್ಪಳಿಸಿ ಬಿದ್ದಿದೆ.
ಬುಧವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತಿಮಿಂಗಿಲದ ಕೊಳೆತ ವಾಸನೆ ಪ್ರಯಾಣಿಕರಿಗೆ ಹಿಂಸೆ ನೀಡಲಾರಂಭಿಸಿದೆ. ಸಮೀಪದಲ್ಲಿಯೇ ಮರವಂತೆ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಗಾರ್ಡನ್ ಇದೆ. ತೀರಕ್ಕೆ ತಾಗಿಕೊಂಡೇ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತಿದೆ. ನೂರಾರು ಪ್ರವಾಸಿಗರು ಕಡಲತೀರ ವೀಕ್ಷಣೆ ಮಾಡುತ್ತಾರೆ. ಆದರೆ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹೆದ್ದಾರಿಯಲ್ಲಿ ಪ್ರಯಾಣಿಸುವವರು ಹಿಡಿ ಶಾಪ ಹಾಕುತ್ತಿದ್ದಾರೆ. ತಕ್ಷಣ ಸಂಬಂಧಪಟ್ಟವರು ದುರ್ವಾಸನೆ ಬೀರುವ ಮೀನಿನ ಅಂತ್ಯಕ್ರಿಯೆಗೆ ಮುಂದಾಗಬೇಕಿದೆ.