ಬಂಟ್ವಾಳ, ಸೆ 21 (DaijiworldNews/MS): ಮಂಗಳೂರಿನಿಂದ ಪುತ್ತೂರಿಗೆ ಬರುತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕೆಯ ಪರ್ಸ್ ಅನ್ನು ಮಂಗಳವಾರ ಎಗರಿಸಿದ್ದ ಕಳ್ಳಿಯನ್ನು ಪತ್ತೆ ಹಚ್ಚಲಾಗಿದ್ದು, ಸದ್ಯಕ್ಕೆ ಕಂಕನಾಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಖಾಸಗಿ ಬಸ್ಸಿನಲ್ಲಿ ಪಯಣಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿಯೊಬ್ಬರ ಪರ್ಸ್ ಅನ್ನು ಮಹಿಳೆಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಕಳವು ಪ್ರಕರಣಕ್ಕೆ ಕ್ಯಾಮರದಲ್ಲಿ ಸೆರೆಯಾಗಿದ್ದು, ಕಳವು ಸಂಬಂಧಿಸಿ ಯೋಜನಾಧಿಕಾರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ನಡುವೆ ಬಸ್ನಲ್ಲಿ ವೃದ್ಧ ಮಹಿಳೆಯೊಬ್ಬರು ಅವರ ಪರ್ಸ್ ಅನ್ನು ಕಳವು ಮಾಡುವ ದೃಶ್ಯ ಬಸ್ನಲ್ಲಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದಲ್ಲದೆ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇಂದು ಬೆಳಿಗ್ಗೆ ಮಂಗಳೂರಿನಿಂದ ಉಪ್ಪಿನಂಗಡಿಗೆ ಹೊರಟಿದ್ದ ಸೆಲಿನಾ ಬಸ್ ನಲ್ಲಿ ಅದೇ ಅಜ್ಜಿ ಹೊರಟಿರುವುದನ್ನು ಕಂಡ ನಿರ್ವಾಹಕ ಸಂದೀಪ್ ಅವರು ,ನಿನ್ನೆ ಘಟನೆ ನಡೆದಿದ್ದ ಮಹೇಶ್ ಬಸ್ಸಿನ ಚಾಲಕ ರೋಶನ್ ಅವರಿಗೆ ಕರೆ ಮಾಡಿ ಖಚಿತಪಡಿಸಿದ್ದರು. ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ಬಿ.ಸಿ.ರೋಡಿನಲ್ಲಿ ಪೊಲೀಸರೂ ಸಿದ್ಧರಾಗಿದ್ದರು. ಈ ನಡುವೆ ವಿಷಯ ಅರಿತ ವೃದ್ಧೆ ಪಡೀಲ್ ನಲ್ಲಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದು, ನಿರ್ವಾಹಕ ಮತ್ತು ಚಾಲಕ ತಡೆದಿದ್ದಾರೆ. ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಪುತ್ತೂರು ಪೊಲೀಸರ ನಿರ್ದೇಶನದಂತೆ ಆ ವೃದ್ಧೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.