ಪಡುಬಿದ್ರಿ, ಸೆ 21 (DaijiworldNews/MS): ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಯೋರ್ವನ ಮನೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ 13,073 ಕೆ.ಜಿ. ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಇಲಾಖೆಗೆ ಬಂದ ನಿಖರ ಮಾಹಿತಿಯಂತೆ ಈ ದಾಳಿ ನಡೆದಿದ್ದು , ಕಾಪು ತಾಲೂಕು ನಡ್ಸಾಲು ಗ್ರಾಮ ಕನ್ನಂಗಾರ್ ಎಂಬಲ್ಲಿ ಮೊಹಮದ್ ಶಫೀಕ್ ಎಂಬಾತನ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿ, ಆಪಾದಿತರ ಮನೆಯ ಹೊರಾಂಗಣ ಮತ್ತು ಎದುರು ಇರುವ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸುವ ಸುಮಾರು 13,073 ಕೆ.ಜಿ. ಪಡಿತರ ಅಕ್ಕಿ ಪತ್ತೆಯಾಗಿದೆ.
50 ಕೆ.ಜಿ ತೂಕದ 33 ಚೀಲ ಬೆಳ್ತಿಗೆ ಅಕ್ಕಿ (ಒಟ್ಟು ತೂಕ 1650 ಕೆ.ಜಿ), 50 ಕೆ ಜಿ ತೂಕದ 192 ಚೀಲ ಕುಚಲಕ್ಕಿ (ಒಟ್ಟು ತೂಕ 9600 ಕೆ.ಜಿ), 20 ಕೆ ಜಿ ತೂಕದ 31 ಚೀಲ ಕುಚಲಕ್ಕಿ (ಒಟ್ಟು ತೂಕ 620 ಕೆ.ಜಿ), 30 ಕೆ.ಜಿ. ತೂಕದ 02 ಚೀಲ ಕುಚಲಕ್ಕಿ (ಒಟ್ಟು ತೂಕ 60 ಕೆ.ಜಿ), ಮತ್ತು ಹೊಲಿಗೆ ಹಾಕದೇ ಇರುವ 10 ಚೀಲ ಕುಚಲಕ್ಕಿ (ಒಟ್ಟು ತೂಕ 303 ಕೆ.ಜಿ) ಸೇರಿದಂತೆ ಒಟ್ಟು 2,87,606/- ರೂಪಾಯಿ ಮೌಲ್ಯದ 13,073 ಕೆ.ಜಿ. ಅಕ್ಕಿ, ರೂಪಾಯಿ 4,000/- ಮೌಲ್ಯದ ತೂಕದಯಂತ್ರ-01, ರೂಪಾಯಿ 5,000/- ಮೌಲ್ಯದ ಚೀಲ ಹೊಲಿಯುವ ಯಂತ್ರ-01 ನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಆಹಾರ ಇಲಾಖೆಯ ಇನ್ ಸ್ಪೆಕ್ಟರ್ ಟಿ. ಲೀಲಾನಂದ ಕೊಟ್ಟಿರುವ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ: 3, 7 Essential Commodities Act 1955 ಮತ್ತು ಕಲಂ: 3(2), 18(1) Karnataka Public Distribution& Control Order 2016 ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ಸಿ. ಪೂವಯ್ಯ , ಪ್ರಕಾಶ್ ಸಾಲ್ಯಾನ್ ಪಿಎಸ್ಐ (ತನಿಖೆ) ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.