ಮಂಗಳೂರು, ಸೆ 20 (DaijiworldNews/DB): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕಳೆದ ಜುಲೈ 15ರಂದು ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಜಿಲ್ಲೆಯಿಂದ ವಿಜೇತರಾಗಿದ್ದ ಬೆಂದೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಸೌಜನ್ಯ ಜೆ. ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ನಿರ್ದೇಶನದಂತೆ ಸೆ. 20ರ ಮಂಗಳವಾರ ಕೌಶಲ್ಯ ಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರೊಂದಿಗೆ ಒಂದು ದಿನ ಜಿಲ್ಲಾಧಿಕಾರಿಯವರ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಅವಕಾಶ ಪಡೆದರು.
ಸೆ.20ರ ಬೆಳಗ್ಗೆ 11 ಗಂಟೆಗೆ ಸೌಜನ್ಯ ಅವರು ಬಂಟ್ವಾಳ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರ ತಾಲೂಕು ಭೇಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಜಿಲ್ಲಾಧಿಕಾರಿಯವರಿಗೆ ಸ್ಥಳೀಯರು ಸಲ್ಲಿಸಿದ ಕುಂದು ಕೊರತೆಗಳ ಅಹವಾಲುಗಳ ಸ್ವೀಕೃತಿ ಹಾಗೂ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾದರು.
ನಂತರ ಮಧ್ಯಾಹ್ನ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆದ ಜಿಲ್ಲಾಧಿಕಾರಿಯವರ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿ, ವೀಕ್ಷಿಸಿದರು. ಸಂಜೆ ಜಿಲ್ಲಾಧಿಕಾರಿಗಳು ಸೌಜನ್ಯ ಅವರಿಗೆ ಸನ್ಮಾನಿಸಿ, ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಸ್.ಜಿ. ಹೇಮಚಂದ್ರ, ಸಿಡಾಕ್ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ, ಬೆಂದೂರಿನ ಸೈಂಟ್ ಆಗ್ನೆಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ವೆನಿಸಾ ಮತ್ತಿತರರು ಉಪಸ್ಥಿತರಿದ್ದರು.