ಕಾಸರಗೋಡು, ಸೆ 20 (DaijiworldNews/DB): ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಸೆಪ್ಟಂಬರ್ 22ರ ಗುರುವಾರದಿಂದ ಮೂರು ದಿನಗಳ ಕಾಲ ರಾಷ್ಟ್ರ ಮಟ್ಟದ ಕಾವ್ಯ ಕಮ್ಮಟವನ್ನು ಎಡನೀರು ಮಠದಲ್ಲಿ ಹಮ್ಮಿಕೊಂಡಿದೆ.
ರಾಷ್ಟ್ರ ಮಟ್ಟದಿಂದ ಸುಮಾರು 60 ಮಂದಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಕವಿ ಡಾ. ವಸಂತಕುಮಾರ ಪೆರ್ಲ ಅವರು ನಿರ್ದೇಶಕರಾಗಿದ್ದಾರೆ.
ಗುರುವಾರ ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಹಿರಿಯ ಕವಯಿತ್ರಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಅವರು ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಡಾ. ರಮಾನಂದ ಬನಾರಿ ಮತ್ತು ವಿದ್ವಾಂಸ ಲಕ್ಷ್ಮೀಶ ತೋಳ್ಳಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೇಖಕ - ಅನುವಾದಕ ಪ್ರೊ. ಪಿ. ಎನ್. ಮೂಡಿತ್ತಾಯ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್., ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಭಾಗವಹಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಕಮ್ಮಟದಲ್ಲಿ ಡಾ. ಯು. ಮಹೇಶ್ವರಿ, ಡಾ. ವಸಂತಕುಮಾರ ಪೆರ್ಲ, ಬಿ. ಆರ್ ಸೂರಜ್, ಸರಸ್ವತಿ ಚಿಮ್ಮಲಗಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಧನಂಜಯ ಕುಂಬಳ, ನಾಗರಾಜ ತಲಕಾಡು, ಸುಬ್ಬು ಹೊಲೆಯಾರ್, ಡಾ. ಎಚ್. ಎಂ. ಚನ್ನಪ್ಪಗೋಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಶನಿವಾರ ಮಧ್ಯಾಹ್ನ ನಡೆಯುವ ಕವಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ. ಆರ್. ಲಕ್ಷ್ಮಣ ರಾವ್ ಭಾಗವಹಿಸುವರು. ಮೂರು ದಿನಗಳ ಕಾಲವೂ ಗುಂಪು ಚರ್ಚೆ, ಕಾವ್ಯ ರಚನೆ, ಕವಿಗೋಷ್ಠಿ ಮೊದಲಾದ ಕಾರ್ಯಕ್ರಮ ಇರಲಿದೆ. ಶುಕ್ರವಾರ ಸಂಜೆ ಪದ್ಯಾಣ ಗಣಪತಿ ಭಟ್ ಮತ್ತು ಮುಳಿಯ ಶಂಕರ ಭಟ್ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಮಧ್ಯಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯವಿದ್ದು, ಕವಿ ಬಿ. ಆರ್. ಲಕ್ಷ್ಮಣರಾವ್ ಸಮಾರೋಪ ನುಡಿಗಳನ್ನು ಅಡಲಿದ್ದಾರೆ. ಸುಬ್ಬು ಹೊಲೆಯಾರ್ ಮುಖ್ಯ ಅತಿಥಿಯಾಗಿದ್ದು, ಡಾ. ವಸಂತಕುಮಾರ ಪೆರ್ಲ ಕಮ್ಮಟದ ಫಲಶೃತಿ ಬಗ್ಗೆ ಮಾತನಾಡಲಿದ್ದಾರೆ. ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಪ್ರೊ. ಪಿ.ಎಸ್. ಮೂಡಿತ್ತಾಯ, ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಅವರು ಪಾಲ್ಗೊಳ್ಳುತ್ತಾರೆ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು.