ಕುಂದಾಪುರ,ಫೆ 10 (MSP): ಹೆದ್ದಾರಿ ಅಗಲೀಕರಣ ಕಾಮಗಾರಿ, ಹೆದ್ದಾರಿ ನಡುವಿನ ಡಿವೈಡರ್ ಸಮಸ್ಯೆ ಹಾಗೂ ಅಲ್ಲಲ್ಲಿ ಯಾವುದೇ ರಿಪ್ಲೆಕ್ಟರ್ ಇಲ್ಲದೇ ಅಳವಡಿಸಲಾಗುತ್ತಿರುವ ಬ್ಯಾರಿಕೇಡ್ಗಳ ಸಮಸ್ಯೆಯಿಂದಾಗಿ ನಿರಂತರ ವಾಹನಗಳ ಅಪಘಾತಗಳು ಸಂಭವಿಸುತ್ತಿದ್ದು, ಶುಕ್ರವಾರ ರಾತ್ರಿ ಟ್ಯಾಂಕರ್ ಒಂದು ಪಲ್ಟಿಯಾಗಿ ಸಂಚಾರ ಅಸ್ತವಸ್ತಗೊಂಡ ಘಟನೆ ಕುಂದಾಪುರದ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮಂಗಳೂರು ಕಡೆಯಿಂದ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದ ಟ್ಯಾಂಕರ್ ಸರ್ಜನ್ ಆಸ್ಪತ್ರೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಕಾಣದೆ ಸಮೀಪ ಬಂದಾಗ ಗೊಂದಲಕ್ಕೊಳಗಾದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಿಯಂತ್ರಣ ಕಳೆದುಕೊಂಡ ಬುಲೆಟ್ ಟ್ಯಾಂಕರ್ನ ಚಾಲಕ ಬ್ಯಾರಿಕೇಡ್ ತಪ್ಪಿಸಲು ಯತ್ನಿಸಿದ ವೇಳೆ ಪಲ್ಟಿಯಾಗಿದೆ.
ಘಟನೆ ಸಂದರ್ಭ ಟ್ಯಾಂಕರ್ ಹಿಂದುಗಡೆ ಯಾವುದೇ ವಾಹನಗಳಿಲ್ಲದೇ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಸುಮಾರು ನಾಲ್ಕು ತಾಸುಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ತಿಳಿದು ಬಂದಿದೆ. ಕೆಲವು ಉದ್ಯಮಿಗಳು ತಮ್ಮ ಜಾಹೀರಾತುಗಳನ್ನು ಪ್ರಕಟಿಸುವ ಸಲುವಾಗಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಹೆದ್ದಾರಿ ನಡುವೆ ತಂದಿಡುತ್ತಿದ್ದು, ಮಾಸಿದ ಬ್ಯಾರಿಕೇಡ್ಗಳನ್ನು ಸಂಚಾರ ಸುವ್ಯವಸ್ಥೆ ದೃಷ್ಟಿಯಿಂದ ತೆರವುಗೊಳಿಸುವಂತೆ ಪೊಲೀಸರು ಕ್ರಮ ವಹಿಸಬೇಕು ಎಂದು ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.