ಮಂಗಳೂರು, ಸೆ 20 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸುನಿಲ್ ಕುಮಾರ್ ಅವರು ಷಡ್ಯಂತ್ರ ಮಾಡಿಕೊಂಡು ಈಡಿಗ ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಡಿಗ ಬಿಲ್ಲವ ಸಮುದಾಯಕ್ಕೆ 500 ಕೋಟಿ ರೂ. ಅನುದಾನ ನೀಡಿ ನಿಗಮ ಮಂಡಳಿ ಘೋಷಣೆ ಮಾಡುವಂತೆ ನಾವು ಬೇಡಿಕೆ ಇರಿಸಿದ್ದೇವೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುನಿಲ್ಕುಮಾರ್ ಅವರು ಐದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಈಡಿಗ ಸಮುದಾಯದ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿ ಸಮುದಾಯ ಭವನಕ್ಕೆ ಐದು ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ನಿಗಮ ಘೋಷಣೆ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ನಮ್ಮ ಸಮುದಾಯಕ್ಕೆ ಮಾಡಿರುವ ವಂಚನೆಯಾಗಿದೆ ಎಂದರು.
ಇನ್ನು ಇತ್ತೀಚೆಗೆ ಮುಖ್ಯಂತ್ರಿಗಳು ಮರಾಠ ಸಮುದಾಯಕ್ಕೆ 100 ಕೋಟಿ ಕೊಟ್ಟು ನಿಗಮವನ್ನು ಘೋಷ ಮಾಡಿದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದು, ಶೀಘ್ರದಲ್ಲೇ ನಿಗಮ ಘೋಷಣೆ ಮಾಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.