ಮಂಗಳೂರು, ಸೆ 20 (DaijiworldNews/MS): ನಾಲ್ಕು ವರ್ಷದ ಹಿಂದೆ ಬೊಕ್ಕಪಟ್ಣ ಬೆಂಗರೆಯ ಮನೆಯೊಂದರಲ್ಲಿ ಮಲಗಿದ್ದ ತಣ್ಣೀರುಬಾವಿಯ ನಿವಾಸಿ ಶಿವರಾಜ ಕರ್ಕೇರಾ ಎಂಬಾತನನ್ನು ಕೊಲೆಗೈದ ಪ್ರಕರಣದ 11 ಮಂದಿ ಆರೋಪಿಗಳನ್ನು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಶಿವರಾಜ ಕರ್ಕೇರಾ
2018ರ ಜ. 21ರಂದು ಸಂಜೆ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಆರೋಪಿಗಳಾದ ಅನೀಶ್, ವಿತರಾಜ್, ಸುನಿಲ್, ಮಲ್ಲೇಶ, ಧೀರಜ್, ಜೀವನ್, ಸತೀಶ್, ವಿಕ್ರಮ್, ಅಜಯ್, ಸುಮನ್ ಹಾಗೂ ಮನೋಜ್ ಅವರು ಬೊಕ್ಕಪಟ್ಣ ಬೆಂಗರೆಯ ನಿವಾಸಿ ರೌಡಿಶೀಟರ್ ಭರತೇಶ್ ಮತ್ತು ಅವರ ಅಣ್ಣಂದಿರ ಮೇಲಿನ ಪೂರ್ವ ದ್ವೇಷದಿಂದ ರೌಡಿ ಭರತೇಶ್ನ ಅಣ್ಣ ಶಿವರಾಜ್ ಕರ್ಕೇರ ಅವರು ಮನೆಯ ಟೆರೇಸ್ ಮೇಲೆ ರಾತ್ರಿ ಮಲಗುವ ಮಾಹಿತಿ ಪಡೆದು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಜ. 22ರಂದು ಮುಂಜಾವ 4.30ಕ್ಕೆ ಮನೆಯೊಂದರ ಟೆರೇಸ್ ಮೇಲೆ ಶಿವರಾಜ ಕರ್ಕೇರಾ ಮಲಗಿರುವುದರ ಬಗ್ಗೆ ಮಾಹಿತಿ ಪಡೆದು ತಲವಾರು, ಕೊಡಲಿಯಿಂದ ಕೊಚ್ಚಿ ಕೊಂದಿರುವುದಾಗಿ ಆರೋಪಿಸಿ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು 37 ಸಾಕ್ಷಿಗಳ ವಿಚಾರಣೆಗೊಳಪಡಿಸಿತ್ತು.
ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಗಳ ಪರವಾಗಿ ವೇಣುಕುಮಾರ್, ಯುವರಾಜ್ ಕೆ. ಅಮೀನ್, ರಾಜೇಶ್ ಅಮ್ಟಾಡಿ, ವಿನಯಕುಮಾರ್, ಗಣೇಶ್ ವಾದಿಸಿದ್ದರು