ಉಡುಪಿ, ಸೆ 19 (DaijiworldNews/SM): ಉಡುಪಿಯ ಮತ್ಸ್ಯ ಪ್ರಿಯರಿಗೆ ಸೋಮವಾರ ಮಧ್ಯಹ್ನಾ ಸಖತ್ ಸುಗ್ಗಿ. ಇಲ್ಲಿನ ತೊಟ್ಟಂ ಸಮುದ್ರ ತೀರದಲ್ಲಿ ಏಕಕಾಲಕ್ಕೆ ಸಾವಿರಾರು ಬೂತಾಯಿ ಮೀನುಗಳು ಕಂಡು ಬಂದು ಮೀನುಪ್ರಿಯರಿಗೆ ಆಶ್ಚರ್ಯ ಮೂಡಿಸಿದವು.
ಒಮ್ಮೇಲೆ ಈ ಪ್ರಮಾಣದಲ್ಲಿ ದಡದಲ್ಲಿ ಬಂದ ಮೀನುಗಳನ್ನು ನೋಡಿ ಸಾರ್ವಜನಿಕರು ಮುಗಿ ಬಿದ್ದು ಮೀನು ಸಂಗ್ರಹ ಮಾಡುವುದು ಕಂಡು ಬಂದಿತು. ಸದ್ಯ ಕಡಲಿನಲ್ಲಿ ಅಪಾರ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಕಂಡು ಬರುತ್ತಿವೆ. ಕೆಲವೊಂದು ಸಂಧರ್ಬದಲ್ಲಿ ಮೀನುಗಾರರು ಬಲೆ ಬೀಸಿ ಕಾದು ಕುಳಿತರೂ ಮೀನು ಸಿಗದೆ ನಿರಾಶರಾಗುತ್ತಾರೆ. ಆದರೆ ಸೋಮವಾರ ತೊಟ್ಟಂ ಸಮುದ್ರ ಕಿನಾರೆಯಲ್ಲಿ ಕಂಡು ಬಂದ ಮೀನಿನ ರಾಶಿ ಎಲ್ಲರ ಹುಬ್ಬೇರಿಸುವಂತಿತ್ತು.
ಸುಮಾರು 200 ಮೀಟರ್ ಉದ್ದಕ್ಕೂ ಬೂತಾಯಿ ಮೀನು ಅಪ್ಪಳಿಸಿದೆ. ಸುಮಾರು 500 ರಿಂದ 600 ಕೆಜಿ ಮೀನು ಇದ್ದಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಸಮುದ್ರದಲ್ಲಿ ದೋಣಿಗಳ ಎಂಜಿನ್ ಶಬ್ದ ಮತ್ತು ಬಲೆಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಂಧರ್ಭ ದಿಕ್ಕು ತಪ್ಪಿ ತೀರಕ್ಕೆ ಬಂದಿರಬಹುದು ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.