ಕುಂದಾಪುರ, ಫೆ 09(SM): ಮೂಲತಃ ಕುಂದಾಪುರದ ನಾಗೂರಿನ ನಿವಾಸಿ ಯಾಗಿದ್ದು, ಕನ್ನಡ ಹಾಗೂ ಇನ್ನಿತರ ಭಾಷೆಯ ಚಲನ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ಬೈಕ್ ಕಾರುಗಳನ್ನು ವಿಶಿಷ್ಠ ರೀತಿಯಲ್ಲಿ ಸಜ್ಜು ಗೊಳಿಸುತ್ತಿದ್ದ ದಿಲೀಪ್ ರಾಜ್(48) ಅವರು ಬೆಂಗಳೂರಿನ ತನ್ನ ನಿವಾಸದಲ್ಲಿ ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದು, ಶನಿವಾರ ಅಂತ್ಯಕ್ರಿಯೆ ನಡೆಸಲಾಗಿದೆ.
ಶುಕ್ರವಾರ ಸಂಜೆ ದಿಲೀಪ್ ರಾಜ್ ಅವರಿಗೆ ಮನೆಯಲ್ಲಿದ್ದ ಸಂದರ್ಭ ಹೃದಯಾಘಾತವಾಗಿದೆ. ಮನೆಯಿಂದ ಜಯದೇವ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ನಾಯಕ ನಟರೊಂದಿಗೆ, ನಿರ್ದೇಶಕ ನಿರ್ಮಾಪಕರೊಂದಿಗೆ ಒಡನಾಟಹೊಂದಿದ್ದ ದಿಲೀಪ್ ರಾಜ್ ಕಿರಿಕ್ ಪಾರ್ಟಿ, ರಾಜರಥ, ಅಣ್ಣಾ ಬಾಂಡ್, ಉಪ್ಪಿ-೨ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗಾಗಿ ತನ್ನದೇ ವರ್ಕ ಶಾಪ್ ನಲ್ಲಿ ವಿಶಿಷ್ಟ ಶೈಲಿಯ ಬೈಕ್ ಕಾರುಗಳನ್ನು ಸಿದ್ಧಪಡಿಸಿ ಜನಪ್ರಿಯರಾಗಿದ್ದರು.
ಸಿನೆಮಾಗಳಿಗಾಗಿಯೇ ಅವರು ಸಿದ್ಧಪಡಿಸಿದ ವಾಹನಗಳು ಆಕರ್ಷಣೆ ಪಡೆದುಕೊಂಡಿದ್ದವು ಸೋಮಕ್ಷತ್ರೀಯ ಗಾಣಿಗ ಸಮಾಜದಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದ ದಿಲೀಪ್ ರಾಜ್ ಇತ್ತೀಚಿಗೆ ನಡೆದ ಸಮಾಜದ ಕಾರ್ಯಕ್ರಮ ಪ್ರತಿಭಾ ಸಂಭ್ರಮದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಲವಲವಿಕೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ದಿಲೀಪ್ ರಾಜ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬ ಹಾಗೂ ಚಿತ್ರರಂಗ ಕಂಬನಿ ಮಿಡಿದಿದೆ. ಅವರ ಹುಟ್ಟೂರಾದ ಕುಂದಾಪುರದ ನಾಗೂರಿನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.