ಮಂಗಳೂರು, ಫೆ 09(SM): ದಕ್ಷಿಣ ಕನ್ನಡ ಜಿಲ್ಲೆಯ ಬಾಡಿಬಿಲ್ಡಿಂಗ್ ಫೆಡರೇಶನ್ ಮಂಗಳೂರು ಇದರ ಸಹಭಾಗಿತ್ವದೊಂದಿಗೆ ಬಂಟ್ವಾಳ ಪಾಣೆಮಂಗಳೂರಿನಲ್ಲಿರುವ ಫಿಟ್ನೆಸ್ ಮಲ್ಟಿಜಿಮ್ ಮತ್ತು ಮಾರ್ಷಲ್ ಆಟ್ಸ್ ಇದರ ಆಶ್ರಯದೊಂದಿಗೆ ಮಿಸ್ಟರ್ ದಕ್ಷಿಣ ಕನ್ನಡ 2019 ದೇಹದಾರ್ಢ್ಯ ಸ್ಪರ್ಧೆ ಪಾಣೆಮಂಗಳೂರಿನಲ್ಲಿ ನಡೆಯಿತು.
ಕತಾರ್ನಲ್ಲಿ ಫಿಟ್ನೆಸ್ ತರಬೇತುದಾರರಾಗಿರುವ ಲಿತೇಶ್ ವೇಗಸ್ ಮಿಸ್ಟರ್ ದಕ್ಷಿಣ ಕನ್ನಡ ಪುರಸ್ಕಾರಕ್ಕೆ ಪಾತ್ರರಾದರು. ಹಾಗೂ ಬಾಡಿಪವರ್ ಇಂಡಿಯಾ ಮುಂಬಯಿಯಲ್ಲಿ ನಡೆದ 75 ಕೆಜಿ ವಿಭಾಗದ ಬಾಡಿಬಿಲ್ಡಿಂಗ್ನಲ್ಲಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ, ‘ಮಿಯಮಿ ಪ್ರೊ ಮಸಲ್ ಮೋಡೆಲ್ ಎಕ್ಸ್ಪೋ’ದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಇಷ್ಟು ಮಾತ್ರವಲ್ಲದೆ ಇತ್ತೀಚೆಗೆ ವಿದೇಶದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕೂಡ ಇವರು ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಹಣ ಬಡವರಿಗೆ ದಾನ:
ಲಿತೇಶ್ ವೇಗಸ್ ಅವರು ಪ್ರಶಸ್ತಿ ರೂಪದಲ್ಲಿ ತನಗೆ ಸಿಕ್ಕಿದ ನಗದು ಮೊತ್ತವನ್ನು ಸಮಾಜದ ಬಡ ಮಕ್ಕಳಿಗೆ ಸಹಾಯವಾಗಿ ನೀಡಲು ನಿರ್ಧರಿಸಿದ್ದು, ಅದರಂತೆ ಬೆಳ್ಮಣ್ನಲ್ಲಿರುವ ರೋಶನ್ ಬೆಳ್ಮಣ್ ಅವರ ‘ಹ್ಯೂಮಿನಿಟಿ’ ಸಂಸ್ಥೆಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೀಗ ಇವರ ಸಮಾಜ ಸೇವೆಯನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.