ಮಂಗಳೂರು, ಸೆ 18 (DaijiworldNews/DB): ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣಾ ಸ್ಥಳ ಮತ್ತು ಭದ್ರತಾ ಸ್ಥಳದಲ್ಲಿ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬ್ಯಾಗೇಜ್ ಸ್ಕ್ರೀನಿಂಗ್ ಯಂತ್ರ ಸಹಿತವಾದ ನಾಲ್ಕು ಮೆಟಲ್ ಡಿಟೆಕ್ಟರ್ ದ್ವಾರಗಳನ್ನು ಅಳವಡಿಸಲಾಗಿದೆ. ನಾಲ್ಕು ದ್ವಾರಗಳ ಪೈಕಿ ಎರಡು ಪುರುಷರಿಗೆ ಹಾಗೂ ಎರಡು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ತಪಾಸಣೆಯ ಬಳಿಕ ಪ್ರಯಾಣಿಕರು ಪರಸ್ಪರ ಸಂಧಿಸುವುದೂ ಸುಲಭವಾಗಲಿದೆ.
ಏವಿಯೇಶನ್ ಸಪೋರ್ಟ್ ಗ್ರೂಪ್ ಬ್ಯಾಗೇಜ್ ಸ್ಕ್ರೀನಿಂಗ್ ಯಂತ್ರಗಳನ್ನು ನಿರ್ವಹಣೆ ಮಾಡಲಿದ್ದಾರೆ. ಎಸ್ಎಚ್ಎಯನ್ನು ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ತಲುಪುವ ನಿಟ್ಟಿನಲ್ಲಿ ಭದ್ರತಾ ಸಿಬಂದಿ ಪ್ರಯಾಣಿಕರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ತಪಾಸಣೆ ವೇಳೆ ತಮ್ಮ ಜೊತೆಗೊಯ್ದ ಸೊತ್ತುಗಳನ್ನು ಇಡಲು ಹೆಚ್ಚುವರಿ ಟ್ರೇ, ಟೇಬಲ್ಗಳನ್ನೂ ಇಲ್ಲಿ ಇಡಲಾಗಿದೆ. ಪ್ರಯಾಣಿಕರ ಟಿಕೆಟ್ ಬಾರ್ ಕೋಡ್ ಸ್ಕ್ಯಾನ್ ಮಾಡಲು ಹೊಸ ಇ-ಗೇಟ್ಗಳನ್ನು ಅಳವಡಿಕೆ ಮಾಡಲಾಗಿದೆ. ಬ್ಯಾಗೇಜ್ಗಳ ತಪಾಸಣೆ ವೇಗವಾಗಿ ನಡೆಯಲು ಹೆಚ್ಚುವರಿ ಬ್ಯಾಗೇಜ್ ರೋಲರ್ಗಳನ್ನು ಅಳವಡಿಸಲಾಗಿದೆ.