ಕಾರ್ಕಳ, ಸೆ 18 (DaijiworldNews/HR): ದೇಶದಲ್ಲಿ ಸ್ವಚ್ಛ ಅಂದೋಲನ, ಪರಿಸರ ಉಳಿವಿಗಾಗಿ ದಂಪತಿಗಳಿಬ್ಬರು ದೇಶದಾದ್ಯಂತ ಬೈಕ್ ಮೂಲಕ ಪ್ರವಾಸ ಮಾಡಿ ಜಾಗೃತಿ ಮೂಡಿಸಿ ಮನಗೆದ್ದಿದ್ದಾರೆ.
ಮೈಸೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತಿರುವ ರವಿಕಿರಣ್ ರಾವ್ ಹಾಗೂ ಅರ್ಚನಾ ಆರ್ ರಾವ್ ಸ್ವಚ್ಚತಾ ಆಭಿಯಾನ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರು. ಅದಕ್ಕಾಗಿ ಜೂನ್ 19 ರಂದು ಮೈಸೂರಿನಿಂದ ಅಭಿಯಾನಕ್ಕೆ ಚಾಲನೆ ನೀಡಿ ಕಾರ್ಕಳಕ್ಕೆ ಅಗಮಿಸಿದ್ದರು. ನಂತರ ಗೋವಾ ಮುಂಬಯಿ ಗುಜರಾತ್ ರಾಜಸ್ಥಾನ ಪಯಣಿಸಿ ಅಲ್ಲಲ್ಲಿ ಅಭಿಯಾನದ ಸ್ಟಿಕ್ಕರ್ ಗಳು ವಿತರಿಸಿದ್ದಾರೆ ಹಾಗೂ ಸಾರ್ವಜನಿಕರೊಡನೆ ವ್ಯವಹರಿಸಿ ಅರಿವು ಮೂಡಿಸಿದ್ದಾರೆ.
ರವಿಕಿರಣ್ ಮೂಲತಃ ಕಾರ್ಕಳದವರಾಗಿದ್ದು, ಕಳೆದ ಒಂದು ವರ್ಷದಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್ನಲ್ಲಿ ಸಕ್ರೀಯರಾಗಿದ್ದಾರೆ. ಬೈಕ್ ರೈಡ್ನಲ್ಲಿ ಅತೀವ ಆಸಕ್ತಿ. ದೇಶದ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭವೇ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನನ್ನ ತಂದೆ ತಾಯಿ ಪತ್ನಿ ಕುಟುಂಬಸ್ಥರ ಸಹಕಾರವೆ ತನಗೆ ಪ್ರೇರಣಾದಾಯಿಯಾಗಿದೆ.ದೇಶದಲ್ಲಿ ಸ್ವಚ್ಚತಾ ಪರಿಕಲ್ಪನೆ ಒಂದೆಡೆಯಾದರೆ ಹಾಗೂ ನಮ್ಮ ಪರಿಸರವು ನಾಳೆಗಾಗಿ ಉಳಿಸಬೇಕು, ಪ್ರಜ್ಞಾವಂತ ನಾಗರೀಕರು ನಾವೆಲ್ಲ ಅದನ್ನು ಮನಗಾಣಬೇಕು. ಪರಿಸರವಿದ್ದರೆ ನಮ್ಮ ಬದುಕು. ಪ್ರಾಣಿ ಜೀವ ಸಂಕುಲ ನದಿ ಮೂಲಗಳನ್ನು ಸಂರಕ್ಷಿಸಬೇಕು, ಪ್ಲಾಸ್ಟಿಕ್ ನಿಂದ ಮಣ್ಣನ್ನು ಕಾಪಾಡಬೇಕು, ಒಟ್ಟಾರೆ ಪರಿಸರ ಜಾಗೃತಿಯೆ ನಮ್ಮ ಗುರಿಯಾಗಿದೆ ಎನ್ನುತ್ತಾರೆ ಕಿರಣ್.
ದೇಶದ ಹದಿನೈದು ಗಡಿಗಳಲ್ಲಿ ಭಾರತೀಯ ಯೋಧರ ಜೊತೆ ಅಭಿಯಾನಕ್ಕೆ ನಮಗೆ ಪ್ರೊತ್ಸಾಹ ನೀಡಿದರು. ದೇಶದ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಒಟ್ಟು 18 ರಾಜ್ಯಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.
ಉತ್ತರ ದಕ್ಷಿಣ ಪೂರ್ಣ ಪಶ್ಚಿಮ ರಾಜ್ಯಗಳಲ್ಲಿ 85 ದಿನಗಳ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾಶ್ಮೀರ, ಲಡಾಕ್, ಡಾರ್ಜಿಲಿಂಗ್ ಪಟ್ನಾ ಬಿಹಾರ್, ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ, ಆಂದ್ರ ಪ್ರದೇಶ, ತೆಲಂಗಾಣ ತಮಿಳುನಾಡು ಕನ್ಯಾಕುಮಾರಿ ತಲುಪಿದ್ದಾರೆ. ಸೆ. 11 ರಂದು ಕೇರಳದ ಮೂಲಕ ಮೈಸೂರಿಗೆ ಮರಳಿ ಸೆ. 16 ರಂದು ಕಾರ್ಕಳ ತಲುಪಿದ್ದಾರೆ.
ಇನ್ನು ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹಗಳು ಉಂಟಾಗಿತ್ತು ಆದ್ದರಿಂದ ಹವಾಮಾನ ವೈಪರಿತ್ಯಗಳು ಸಾಥ್ ನೀಡಲಿಲ್ಲ. ಅದಕ್ಕಾಗಿ ಈಶಾನ್ಯ ರಾಜ್ಯಗಳಲ್ಲಿ ಕನಸು ಈಡೇರಿಲ್ಲ. ನಮ್ಮ ಮುಂದಿನ ಅಭಿಯಾನ ಸಾಧ್ಯವಾದರೆ ಈಶಾನ್ಯ ರಾಜ್ಯಗಳೆ ಮೊದಲ ಪ್ರಾತಿನಿಧ್ಯ ನೀಡುತ್ತೇವೆ ಎಂದಿದ್ದಾರೆ.