ಕುಂದಾಪುರ, ಸೆ 17 (DaijiworldNews/HR): ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತದಾರ, ಎಫ್ಎಸ್ಎಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಜತೆಗೂಡಿ ಕೋಡಿ ಹಾಗೂ ಮರವಂತೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕೋಡಿ ಹಾಗೂ ಮರವಂತೆಯ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹಮ್ಮದ್ ಫಾರೂಕ್ ಮಾತನಾಡಿ, ಎಲ್ಲ ಕಡಲ ತೀರ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ನಮ್ಮ ಆದ್ಯತೆ. ಪ್ರಧಾನಿ ಮೋದಿಯವರು ಕರೆ ನೀಡಿದ ಸ್ವಚ್ಛಾ ಭಾರತ ಅಭಿಯಾನದ ಜಾಗೃತಿ ಎಲ್ಲೆಡೆ ಮೂಡಿದೆ. ಮುಖ್ಯವಾಗಿ ಯುವಕ- ಯುವತಿಯರು, ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದವರು ಹರ್ಷ ವ್ಯಕ್ತಪಡಿಸಿದರು.
ಕಡಲಾಮೆ ಮೊಟ್ಟಿ ಇಡುವ ಕಾಲ, ಸ್ವಚ್ಛತಾ ಅಭಿಯಾನದಿಂದ ಕಡಲಾಮೆಗಳಿಗೆ ವರದಾನವಾಗಿದೆ. ಇದೊಂದು ಒಳ್ಳೆಯ ಸಂಗತಿ. ಎಲ್ಲ ಬೀಚ್ಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು, ಕಡಲ್ಕೊರೆತ ತಡೆಗಟ್ಟಲು ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರಕಾರ ಮುಂದಾಗಿದೆ ಎಂದು ಕುಂದಾಪುರದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಽಕಾರಿ ಡಾ| ಆಶಿಶ್ ರೆಡ್ಡಿ ಹೇಳಿದರು.
ಈ ಅಭಿಯಾನದಲ್ಲಿ ಕುಂದಾಪುರ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್, ಕರಾವಳಿ ಕಾವಲು ಪಡೆಯ ಗಂಗೊಳ್ಳಿ ಠಾಣಾಧಿಕಾರಿ ನಂಜಪ್ಪ, ತಂಡ, ಚಕ್ರೇಶ್ವರಿ ದೇಗುಲದ ಅಧ್ಯಕ್ಷ ಗೋಪಾಲ ಪೂಜಾರಿ, ಎಫ್ಎಸ್ಎಲ್ ಅಧ್ಯಕ್ಷ ರಾಕೇಶ್ ಸೋನ್ಸ್, ಲಯನ್ಸ್ ಕ್ಲಬ್ ಅಮೃತರ ಅಧ್ಯಕ್ಷೆ ಸರಸ್ವತಿ ಪುತ್ರನ್, ರಾಷ್ಟ್ರ ಸೇವಿಕಾ ಸಮಿತಿ ಮುಖ್ಯ ಕಾರ್ಯವಾಹ ಪ್ರೇಮಾ ಪಡಿಯಾರ್, ಆರೆಸ್ಸೆಸ್ನ ಸುಬ್ರಹ್ಮಣ್ಯ ಹೊಳ್ಳ, ಲಯನ್ಸ್ ಕ್ಲಬ್ನ ಏಕನಾಥ್ ಬೋಳಾರ್, ಅನುದೀಪ್ ಹೆಗ್ಡೆ, ಬೋರ್ಡ್ ಹೈಸ್ಕೂಲಿನ ಎನ್ನೆಸ್ಸೆಸ್ ಘಟಕ, ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಆಂಟಿ ಪೊಲುಷನ್ ಡ್ರೈವ್ ಸಂಘಟನೆ, ಮತ್ತಿತರರ ಸಂಘಟನೆಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.