ಕಾಸರಗೋಡು, ಸೆ 17 (DaijiworldNews/HR): ಶಾಲೆಗಳಲ್ಲಿ ದೂರು ಪರಿಹಾರ ಸೆಲ್ ಕಡ್ಡಾಯವಾಗಿ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ . ಸತೀದೇವಿ ಹೇಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅದಾಲತ್ ಬಳಿಕ ಈ ವಿಷಯ ತಿಳಿಸಿದ ಅವರು, ಎಲ್ಲಾ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಯಾವುದೇ ಭಯ ವಿಲ್ಲದೆ ಕೆಲಸ ಮಾಡುವ ಸ್ಥಿತಿ ಉಂಟಾಗಬೇಕು. ಶಾಲೆಗಳಲ್ಲಿ ಶಿಕ್ಷಕಿಯರು ಅನುಭವಿಸುವ ಸಮಸ್ಯೆಗಳು ಆಯೋಗದ ಮುಂದೆ ಬರುತ್ತಿದೆ. ಹತ್ತು ಸಿಬಂದಿಗಳು ಇದ್ದಲ್ಲಿ ಅಲ್ಲಿ ಆಂತರಿಕ ದೂರು ಪರಿಹಾರ ಸೆಲ್ ಆರಂಭಿಸಬೇಕು ಎಂದು ಅವರು ಹೇಳಿದರು.
ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸಬೇಕು. ಈ ಬಗ್ಗೆ ಸರಕಾರ ನಿರ್ದೇಶನ ನೀಡಲಾಗಿದೆ. ವಿವಾಹ ನೋಂದಣಿ ಸಂದರ್ಭದಲ್ಲಿ ಈ ಬಗ್ಗೆ ಖಾತರಿಪಡಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೌನ್ಸಿಲಿಂಗ್ ಕೇಂದ್ರ ತೆರೆಯಬೇಕು. ಇದರಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗ್ರತಾ ಸಮಿತಿಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ಶಾಲೆಗಳನ್ನು ಕೇಂದ್ರೀಕರಿಸಿ ಲಿಂಗ ತಾರತಮ್ಯ ವಿರುದ್ಧ ಅಭಿಯಾನ ವೊಂದನ್ನು ನಡೆಸಲಾಗುವುದು. ಕಾಸರಗೋಡಿನಿಂದ ಈ ಅಭಿಯಾನ ಆರಂಭಗೊಳ್ಳಲಿದೆ ಎಂದು ಹೇಳಿದರು.
ಅದಾಲತ್ ನಲ್ಲಿ 25 ದೂರುಗಳ ಪರಿಶೀಲನೆ ನಡೆಸಲಾಯಿತು. ಈ ಪೈಕಿ 10 ದೂರುಗಳನ್ನು ಇತ್ಯರ್ಥಗೊಳಿಸಲಾಯಿತು. ಹತ್ತು ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಮೂರು ದೂರುಗಳ ಬಗ್ಗೆ ಪೊಲೀಸರಿಂದ ವರದಿ ಕೇಳಲಾಗಿದೆ. ಎರಡು ದೂರುಗಳ ಬಗ್ಗೆ ಕೌನ್ಸಿಲಿಂಗ್ ನಡೆಸಲು ಆದೇಶ ನೀಡಲಾಗಿದೆ.
ಆಯೋಗದ ಸದಸ್ಯರಾದ ನ್ಯಾಯವಾದಿ ಎಸ್. ರೇಣುಕಾ ದೇವಿ ತಂಗಚ್ಚಿ, ಜಿಲ್ಲಾ ಪಂಚಾಯತ್ ಜಾಗ್ರತಾ ಸಮಿತಿ ಸದಸ್ಯೆ ಸುಕುಮಾರಿ, ರಮ್ಯಾ ಶ್ರೀನಿವಾಸನ್, ಮಹಿಳಾ ಸೆಲ್ ಸಬ್ ಇನ್ಸ್ ಪೆಕ್ಟರ್ ಟಿ.ಕೆ. ಚಂದ್ರಿಕಾ, ಸುಪ್ರಿಯಾ ಜೇಕಬ್ ಮೊದಲಾದವರು ಉಪಸ್ಥಿತರಿದ್ದರು.