ಕುಂದಾಪುರ, ಸೆ 17 (DaijiworldNews/HR): ಮೊದಲ ಪ್ರಧಾನಿ ನೆಹರು ಜನ್ಮ ದಿನವನ್ನು ಮಕ್ಕಳ ದಿನಾಚರಣೆ, ಮಾಜಿ ರಾಷ್ಟ್ರಪತಿ ರಾಧಕೃಷ್ಣನ್ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಅವರದೇ ಆಶಯದಂತೆ ರಕ್ತದಾನ, ಆರೋಗ್ಯ ಶಿಬಿರ, ಬಡವರಿಗೆ ನೆರವಾಗುವಂತಹ ಸೇವಾ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿರುವುದು ಉತ್ತಮ ಕಾರ್ಯ. ರಕ್ತದಾನ ಮಹತ್ತರವಾದ ಕಾರ್ಯ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕುಂದಾಪುರ ಮಂಡಲ, ಯುವ ಮೋರ್ಚಾ ಕುಂದಾಪುರದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಸಹಯೋಗದಲ್ಲಿ ಇಲ್ಲಿನ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲ ರಂಗದಲ್ಲೂ ಅನೇಕ ಪ್ರಗತಿಯಾಗುತ್ತಿದ್ದು, ಆದರೆ ರಕ್ತಕ್ಕೆ ಪರ್ಯಾಯ ರಕ್ತವೇ ಹೊರತು ಬೇರೆ ಯಾವುದು ಕೊಡಲು ಸಾಧ್ಯವಿಲ್ಲ. ರಕ್ತದಾನದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡುತ್ತಿದ್ದು, ಅದು ಇನ್ನಷ್ಟು ಹೆಚ್ಚಾಗಬೇಕಿದೆ ಎಂದ ಅವರು, ಕುಂದಾಪುರದ ರೆಡ್ಕ್ರಾಸ್ ಘಟಕ ನಿರಂತರವಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಇಲ್ಲಿನ ಕಟ್ಟಡ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ಸಭೆಯಲ್ಲಿ ಪ್ರಸ್ತಾವಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಶಾಸಕರು ಇದೇ ವೇಳೆ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ರೆಡ್ಕ್ರಾಸ್ ಘಟಕದ ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಮಾತನಾಡಿ, ನಮ್ಮ ಈ ಘಟಕದ ಆಶ್ರಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ವರ್ಷಕ್ಕೆ 75-80 ರಕ್ತದಾನ ಶಿಬಿರ ನಡೆಯುತ್ತಿದೆ. 10 ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹವಾಗುತ್ತಿದೆ. ಇಲ್ಲಿರುವ ಜನೌಷಧ ಕೇಂದ್ರದಲ್ಲೂ ದಿನಕ್ಕೆ 400-500 ಮಂದಿ ಪ್ರಯೋಜನ ಪಡೆಯುವಂತಾಗಿದೆ ಎಂದವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ, ಸ್ವಚ್ಛತಾ ಕಾರ್ಯಕ್ರಮ, ಅಂಗನವಾಡಿ ದತ್ತು ಕಾರ್ಯಕ್ರಮ ಸಹಿತ ಅ.2 ರವರೆಗೆ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ತಿಳಿಸಿದರು.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರಣಿ ಸದಸ್ಯ ಪ್ರಜ್ವಲ್, ಜಿಲ್ಲಾ ಪ್ರ.ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ರೆಡ್ಕ್ರಾಸ್ ಘಟಕದ ಪದಾಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.