ಮೂಡುಬಿದಿರೆ, ಸೆ 17 (DaijiworldNews/DB): ಅಡಿಕೆ ಗೋಡೌನ್ನ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದ ಉತ್ತರ ಪ್ರದೇಶದ ಕಾರ್ಮಿಕನೊಬ್ಬನನ್ನು ಮೂಡುಬಿದಿರೆಯ ಆ್ಯಂಬುಲೆನ್ಸ್ ಮಾಲಕ ಮತ್ತು ಚಾಲಕರೊಬ್ಬರು ಮೂಡುಬಿದಿರೆಯಿಂದ 2700 ಕಿಮೀ ದೂರವಿರುವ ಮೊರಾದಾಬಾದ್ಗೆ ಕೇವಲ 41 ಗಂಟೆಗಳಲ್ಲಿ ಸಾಗಿಸಿದ್ದಾರೆ. ಕಡಿಮೆ ಅವಧಿಯಲ್ಲಿ ದೀರ್ಘ ಪ್ರಯಾಣವನ್ನು ಕ್ರಮಿಸಿದ ಚಾಲಕನ ಚಾಣಾಕ್ಷತನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಮೂಡುಬಿದಿರೆಯ ಅನಿಲ್ ರೂಬೆನ್ ಮೆಂಡೋನ್ಸಾ ಅವರೇ ಈ ಸಾಹಸ ಮೆರೆದವರು. ಮೂಡುಬಿದಿರೆಯ ಅಡಿಕೆ ಗೋಡೌನ್ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ಮೆಹೆಂದಿ ಹಸನ್ ಕೆಲಸ ನಿರ್ವಹಿಸುತ್ತಿದ್ದಾಗ ಗೋಡೌನ್ನ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದಿದ್ದ. ಆದರೆ ಉತ್ತರಪ್ರದೇಶದ ಅವರ ಇತರ ಸಹದ್ಯೋಗಿಗಳ ಸಲಹೆ ಮೇರೆಗೆ ಗೋಡೌನ್ ಮಾಲಕರು ಆತನನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯಲು ವಿಮಾನ ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆ ಮಾಡಿದ್ದರು. ಆದರೆ ನರ್ಸ್ ಅಥವಾ ವೈದ್ಯರು ಜೊತೆಗಿರದ ಹೊರತು ರೋಗಿಯನ್ನು ಕರೆದೊಯ್ಯಲಾಗುವುದಿಲ್ಲ ಎಂಬುದಾಗಿ ಏರ್ಲೈನ್ಸ್ ಟಿಕೆಟ್ ನೀಡಲು ನಿರಾಕರಿಸಿತ್ತು.
ಹೀಗಾಗಿ ಗೋಡೌನ್ ಮಾಲಕರು ಐರಾವತ ಆಂಬುಲೆನ್ಸ್ ಮಾಲಕ-ಚಾಲಕ ಅನಿಲ್ ಮೆಂಡೋನ್ಸಾ ಅವರ ಸಹಾಯ ಯಾಚಿಸಿದ್ದರು. ಇದಕ್ಕೆ ಒಪ್ಪಿದ ಅನಿಲ್ ಅವರು, ವೈದ್ಯರು ಮತ್ತು ನರ್ಸ್ಗಳಿಲ್ಲದಿದ್ದರೂ, ಆಕ್ಸಿಜನ್ ಸಿಲಿಂಡರ್, ಆಸ್ಪತ್ರೆಯಿಂದ ನೀಡಲಾದ ಡಿಸ್ಚಾರ್ಜ್ ಪ್ರಮಾಣಪತ್ರ ಮತ್ತು ಪೊಲೀಸ್ ಠಾಣೆಯಿಂದ ನೀಡಲಾದ ಪತ್ರ ತೆಗೆದುಕೊಂಡು ಕೋಮಾ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಶ್ವತ್ ಎಂಬ ಇನ್ನೊಬ್ಬ ಚಾಲಕನನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು.
ಸೆಪ್ಟಂಬರ್ 10ರ ಸಂಜೆ ಮೂಡುಬಿದಿರೆಯಿಂದ ಹೊರಟ ಅವರು ಸೆಪ್ಟಂಬರ್ 12 ರ ಬೆಳಗ್ಗೆ 10.30ಕ್ಕೆ ಅಂದರೆ ಕೇವಲ 41 ಗಂಟೆಗಳಲ್ಲಿ ಮೊರಾದಾಬಾದ್ನ ಶ್ರೇಯಾ ನ್ಯೂರೋ ಸೆಂಟರ್ ತಲುಪಿದ್ದಾರೆ. ಹಸನ್ನ ಸಹದ್ಯೋಗಿಯೊಬ್ಬ ವಾಹನ ಚಲಾಯಿಸುವುಯದು ತಿಳಿದಿದ್ದರಿಂದ ಹೆಚ್ಚು ಸಹಾಯವಾಯಿತು ಎನ್ನುತ್ತಾರೆ ಅವರು. ಆಂಬುಲೆನ್ಸ್ಗೆ ಡೀಸೆಲ್ ತುಂಬಿಸುವುದು ಹೊರತುಪಡಿಸಿ ಬೇರೆಲ್ಲೂ ವಾಹನವನ್ನು ನಿಲ್ಲಿಸದೇ ಕ್ರಮಿಸಿದ್ದಾರೆ.
ವೈದ್ಯರು, ನರ್ಸ್ಗಳಿಲ್ಲದೆ ಕೋಮಾ ರೋಗಿಯನ್ನು ಕರೆದುಕೊಂಡು ಬಂ ಅನಿಲ್ ಸಾಹಸವನ್ನು ನ್ಯೂರಾಲಾಜಿಸ್ಟ್ ಡಾ. ಅಜಯ್ ಜೈನ್ ಶ್ಲಾಘಿಸಿದ್ದಾರೆ.
ಅನಿಲ್ ಅವರು ಸೆಪ್ಟಂಬರ್ 15ಕ್ಕೆ ಮೂಡುಬಿದಿರೆಗೆ ಹಿಂತಿರುಗಿದ್ದಾರೆ. ಪ್ರಯಾಣದ ಸಂಪೂರ್ಣ ವೆಚ್ಚವನ್ನು ಗೋಡೌನ್ ಮಾಲಕರೇ ಭರಿಸಿದ್ದಾರೆ. ಹಸನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಅನಿಲ್ ತಿಳಿಸಿದ್ದಾರೆ.