ಮುಲ್ಕಿ, ಸೆ 16 (DaijiworldNews/SM): ಇಲ್ಲಿನ ಕಾರ್ನಾಡು ಶಾಲೆಗೆ ತೆರಳಿದ್ದ 9 ವರ್ಷದ ಮಗು ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ನಾಟಕೀಯ ಅಪಹರಣ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಆಘಾತಕಾರಿ ಸತ್ಯಾಂಶ ತಿಳಿದಿದೆ.
ಹೆಜಮಾಡಿಯಿಂದ ಪ್ರತಿನಿತ್ಯ 9 ಗಂಟೆಗೆ ಕಾರ್ನಾಡ್ ಶಾಲೆಗೆ ಬಸ್ಸಿನಲ್ಲಿ ಬರುತ್ತಿದ್ದ 4 ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಶಾಲೆ ಎದುರು ಭಾಗದಲ್ಲಿ ಬಸ್ಸಿನಲ್ಲಿ ಬಂದು ಇಳಿದಿದ್ದು ತತ್ಕ್ಷಣ ಅಲ್ಲಿಗೆ ಆಟೋದಲ್ಲಿ ಆಗಮಿಸಿದ ಮಗುವಿನ ತಂದೆ ಹರೀಶ್ ಎಂಬಾತ ಮಗುವನ್ನು ಆಟೋದಲ್ಲಿ ಕುಳ್ಳಿರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮತ್ತೆ ಅದೇ ಮಗುವಿನ ತಂದೆ ಆರೋಪಿ ಹರೀಶ್ ಶಾಲೆಗೆ ಬಂದು ತನ್ನ ಮಗು ಎಲ್ಲಿ? ಎಂದು ನಾಟಕ ಸೃಷ್ಟಿಸಿ ಮೂಲ್ಕಿ ಠಾಣೆಗೆ ದೂರು ನೀಡಲು ಹೋಗಿದ್ದಾನೆ.
ಇತ್ತ ಮಗು ಶಾಲೆಯಲ್ಲಿ ನಾಪತ್ತೆಯಾದ ಬಗ್ಗೆ ಶಾಲೆಯಲ್ಲಿ ಹಾಗೂ ಕಾರ್ನಾಡು ಪೇಟೆಯಲ್ಲಿ ಆತಂಕದ ವಾತಾವರಣ ಏರ್ಪಟ್ಟು ಮಗುವಿನ ಆಪರಣದ ಬಗ್ಗೆ ವದಂತಿಗಳು ಸೃಷ್ಟಿಯಾಗಿದ್ದವು. ಕೂಡಲೇ ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವಾ ಉತ್ತು ಮೂಲ್ಕಿ ಪೊಲೀಸರು ಆಗಮಿಸಿ ಶಾಲೆಯ ಬಳಿಯ ಕೇಶವ ಸುವರ್ಣ ಎಂಬವರ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಗುವಿನ ತಂದೆ ಆರೋಪಿ ಹರೀಶ ಮಗುವನ್ನು ವಾಪಸ್ ಕರೆದುಕೊಂಡು ಹೋಗುವ ದೃಶ್ಯ ಕಂಡು ಬಂದು ಆತನ ಕೃತ್ಯ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಯ ನಾಟಕೀಯ ಕೃತ್ಯದ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.