ಮಂಗಳೂರು, ಸೆ 16 (DaijiworldNews/DB): ಬದುಕಿನ ಮಹತ್ವ ಅರಿತುಕೊಂಡು, ದುಷ್ಚಟಗಳು ಹಾಗೂ ಋಣಾತ್ಮಕ ಚಿಂತನೆಗಳಿಂದ ದೂರವಾದರೆ ಆತ್ಮಹತ್ಯೆಯಂತಹ ದುಷ್ಕೃತ್ಯಗಳನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಶ್ರೀ ಮಂಜುನಾಥೇಶ್ವರ ಬ್ಯುಸಿನೆಸ್ ಮ್ಯಾನೆಜ್ಮೆಂಟ್ ವಿಭಾಗದ ಕಾನ್ಫರೆನ್ಸ್ ಹಾಲ್ನಲ್ಲಿ ಸೆ.16ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಾವಿಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸುತ್ತಿರುವುದೇ ವಿಪರ್ಯಾಸ. ಒಂದು ಕಡೆ ಆಧುನಿಕತೆಗೆ ಒಗ್ಗಿಕೊಂಡು ಅಭಿವೃದ್ಧಿಯತ್ತ ನಾಗಾಲೋಟದಿಂದ ಓಡುತ್ತಿದ್ದೇವೆ. ಇನ್ನೊಂದೆಡೆ ಮಾನಸಿಕ ಸದೃಢತೆಯಲ್ಲಿ ಹಿಂದೆ ಜಾರುತ್ತಿದ್ದೇವೆ. ಕೆಟ್ಟ ದಾರಿ ಹಾಗೂ ದುಷ್ಟರ ಸಂಗವನ್ನು ಆಯ್ಕೆ ಮಾಡುವ ಮುನ್ನ ಚಿಂತಿಸಬೇಕು. ಜತೆಗೆ ಕ್ಷಣಿಕ ಸುಖದ ಆಸೆ, ಆಕಾಂಕ್ಷೆಗಳನ್ನು ತಿರಸ್ಕರಿಸಿ ಗುರಿಯೆಡೆಗೆ ಮುನ್ನಡೆಯಬೇಕು. ಆತ್ಮಹತ್ಯೆಯಿಂದ ನಮ್ಮ ಅವಲಂಬಿತರು ಅತಂತ್ರವಾಗುತ್ತಾರೆಯೇ ಹೊರತು ಮತ್ತೇನೂ ಬದಲಾಗುವುದಿಲ್ಲ. ಕ್ಷುಲ್ಲಕ ಕಾರಣಗಳಿಗೆ ಅಮೂಲ್ಯವಾದ ಜೀವನವನ್ನು ಬಲಿಕೊಡಬಾರದು ಎಂದರು.
ನಾವು ಎಲ್ಲಿ, ಯಾರ ಮನೆಯಲ್ಲಿ ಹುಟ್ಟಬೇಕು ಎಂಬ ಆಯ್ಕೆಯನ್ನು ಭಗವಂತ ನಮಗೆ ನೀಡಿಲ್ಲವಾದರು, ನಾವು ಯಾವ ರೀತಿ ಜೀವಿಸಬೇಕು ಎಂಬ ಆಯ್ಕೆಯನ್ನು ನಮಗೆ ನೀಡಿದ್ದಾನೆ. ಆದ್ದರಿಂದ ಸದಾ ಧನಾತ್ಮಕ ಚಿಂತನೆಗಳನ್ನು ಮಾಡುತ್ತಾ ಬದುಕಿನ ಅನನ್ಯತೆಯನ್ನು ಅರಿತುಕೊಂಡರೆ ಮಾತ್ರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕಿಶೋರ್ ಕುಮಾರ್, ಕಾಲೇಜಿನ ಪ್ರಾಂಶುಪಾಲೆ ಅರುಣಾ ಪಿ. ಕಾಮತ್, ಸಂಪನ್ಮೂಲ ವ್ಯಕ್ತಿ ಅರುಣಾ ಎಡಿಯಾಲ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್, ತಾಲೂಕು ಆರೋಗ್ಯಾಧಿಕಾರಿ ಡಾ. ಚಿರಾಗ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಮನೋರೋಗ ತಜ್ಞರಾದ ಡಾ. ಶಿಲ್ಪ, ಡಾ. ಸುಪ್ರಿತಾ ಮತ್ತಿತರರು ಉಪಸ್ಥಿತರಿದ್ದರು.