ಕಾರ್ಕಳ, ಸೆ 16 (DaijiworldNews/DB): ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಅಕ್ರಮ ಕಲ್ಲು ಕೋರೆಗಳು ಆರ್ಭಟಿಸುತ್ತಿದ್ದು, ಅಧಿಕಾರಿಗಳ ಮೌನ ನಿಲುವು ಸಂದೇಹಕ್ಕೆ ಕಾರಣವಾಗುತ್ತಿದೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 189 ಕಲ್ಲುಕೋರೆಗಳಿವೆ. ಅವುಗಳಲ್ಲಿ ಬಹುತೇಕ ಅನಧಿಕೃತ. ಗಣಿ ಇಲಾಖೆಯಿಂದ ಲೀಸ್ ಪಡೆಯಲಾಗದಿದ್ದರೂ, ಇಂದಿಗೂ ಅಕ್ರಮವಾಗಿ ಕಾರ್ಯಾಚರಿಸುತ್ತಿರುವುದು ಅಧಿಕಾರಿಗಳ ಕೃಪಾಕಟಾಕ್ಷ ಗಣಿದಣಿಗಳ ಮೇಲಿರುವುದು ಸಾಬೀತಾಗಿದೆ.
ಅರಣ್ಯ ಇಲಾಖೆಯೂ ಸಾಥ್!
ತಾಲೂಕಿನ ಬಹುತೇಕ ಜಮೀನುಗಳು ಡೀಮ್ಡ್ ಅರಣ್ಯ ವ್ಯಾಪ್ತಿಗೆ ಒಳಟಪಟ್ಟಿದೆ. ಕಂದಾಯ ಜಮೀನಿಗೂ ಡೀಮ್ಡ್ ಫಾರೆಸ್ಟ್ ಅಡ್ಡಿಯಾಗುತ್ತಿದ್ದು, ಫಲಾನುಭವಿಗಳು ಈ ಜಮೀನನ್ನು ಅನುಭವಿಸದಂತಹ ಕಠಿಣ ಪರಿಸ್ಥಿತಿಯಿದೆ. ಈಗಾಗಲೇ ಸರಕಾರಿ ಭೂಮಿಯಲ್ಲಿ ವಾಸ್ತವ್ಯ ಹೊಂದಿ ಕೃಷಿ ಕಾಯಕ ನಡೆಸುತ್ತಿದ್ದರೂ, ಅವರಿಗೆ ಹಕ್ಕುಪತ್ರ ನೀಡುವಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ 94ಸಿ, 94ಸಿಸಿ ಅಡಿಯಲ್ಲಿ ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ತೊಂದರೆ ಅನುಭವಿಸಿದ್ದರೆ, ಇತ್ತ ಕೃಷಿ ಜಮೀನಿನ ಮಂಜೂರಾತಿಗಾಗಿ ನಮೂನೆ-53 ಮತ್ತು 57ರಲ್ಲಿ ಸಲ್ಲಿಸಿದ ಅರ್ಜಿಗಳು ವಿಲೇಯಾಗದೆ ತಾಲೂಕು ಕಛೇರಿಯಲ್ಲಿ ಕಡತದಲ್ಲೇ ಬಾಕಿಯಾಗಿದೆ.
ಈ ನಡುವೆ ಅಕ್ರಮ ಗಣಿಗಾರಿಕೆಗೆ ಅರಣ್ಯ ಇಲಾಖೆ ಸಾಥ್ ನೀಡುತ್ತಿದ್ದು, ಡೀಮ್ಡ್ ಸರ್ವೇ ನಂಬರ್ಗಳಲ್ಲಿ ಅರಣ್ಯ ಸ್ವರೂಪ ಇಲ್ಲ ಹಾಗೂ ಡೀಮ್ಡ್ ಫಾರೆಸ್ಟ್ ಉಳಿಕೆ ಜಮೀನು ಮುಂತಾದ ಹಿಂಬರಹಗಳನ್ನು ನೀಡುವ ಮೂಲಕ ಅರಣ್ಯ ಇಲಾಖೆ ಗಣಿ ಮಾಲಿಕರನ್ನು ರಕ್ಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪರಿಣಾಮ ತಾಲೂಕಿನಾದ್ಯಂತ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ಮುಂದುವರೆದಿದೆ.
ಭೂ-ವಿಜ್ಞಾನ ಇಲಾಖೆಯೂ ಸಾಥ್
ಅಕ್ರಮ ಗಣಿಗಾರಿಕೆ ಬಗ್ಗೆ ಭೂ-ವಿಜ್ಞಾನ ಇಲಾಖೆಗೆ ದೂರು ನೀಡಿದರೆ, ದೂರು ನೀಡಿದವರ ಬಗ್ಗೆಯೂ ಸರಿಪಡಿಸುವಂತೆ ಗಣಿಮಾಲಿಕರಿಗೆ ಇಲಾಖೆಯೇ ಮಾಹಿತಿ ನೀಡುತ್ತಿರುವುದು ಸಾರ್ವಜನಿಕ ಅಕ್ರೋಶಕ್ಕೆ ಕಾರಣವಾಗಿದೆ.
ಸಮುದ್ರಕ್ಕೆ ಕಲ್ಲು!
ಅಕ್ರಮ ಗಣಿಗಾರಿಕೆಯಿಂದ ಟನ್ಗಟ್ಟಲೆ ಕಲ್ಲುಗಳು ಲಾರಿಗಳ ಮೂಲಕ ಸಮುದ್ರಕೊರೆತಕ್ಕಾಗಿ ಸಮುದ್ರ ಕಿನಾರೆ ಸೇರುತ್ತಿದೆ. ಬೃಹತ್ ಗಾತ್ರದ ಬಂಡೆಗಳನ್ನು ಹೊತ್ತೊಯ್ಯುವ ಲಾರಿಗಳು ಹೆದ್ದಾರಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರೂ, ಪೊಲೀಸ್ ಇಲಾಖೆಯಾಗಲೀ, ಸಾರಿಗೆ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಕಲ್ಲುಗಳು, ಜೆಲ್ಲಿಗಳು ಪರ್ಮಿಟ್ ಇಲ್ಲದೆ ಲಾರಿಗಳಲ್ಲಿ ತುಂಬಿ ಓಡಾಡುತ್ತಿದ್ದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.