ಕಾಸರಗೋಡು, ಸೆ 16 (DaijiworldNews/HR): ಕಾರಡ್ಕ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಜನವಾಸ ಪ್ರದೇಶದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಈಗಾಗಲೇ ಅಪಾರ ಕೃಷಿ ಹಾನಿ ಉಂಟಾಗಿದ್ದು, ಕಾಡಾನೆಗಳನ್ನು ಬೆನ್ನಟ್ಟಲು ಕಣ್ಣೂರು ವಲಯದ ವಿಶೇಷ ತಂಡವು ಈ ಪ್ರದೇಶಕ್ಕೆ ಆಗಮಿಸಿದೆ.
ಅರಣ್ಯ ಇಲಾಖೆಯ ಕಣ್ಣೂರು ನೋರ್ತ್ ವಲಯದ ಅಧಿಕಾರಿ ಕೆ. ಅರ ವಿಜಯಾನಾಥ್, ಎಂ. ಜಿತಿನ್ ಮೊದಲಾದವರ ನೇತೃತ್ವದ ತಂಡವು ಆಗಮಿಸಿದ್ದು, ಇದಲ್ಲದೆ ಕಾಸರಗೋಡು ಅರಣ್ಯ ಇಲಾಖೆ, ಫ್ಲೆಯಿಂಗ್ ಸ್ಕ್ವಾಡ್ ಮೊದಲಾದವುಗಳ ನೇತೃತ್ವದಲ್ಲಿ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿದೆ.
ಕಾಸರಗೋಡು ಅರಣ್ಯ ವಿಭಾಗೀಯ ವಲಯದ ಮುಳಿಯಾರು, ದೇಲಂಪಾಡಿ, ಬೇಡಡ್ಕ, ಕುತ್ತಿಕೋಲ್, ಕಾರಡ್ಕ ಮೊದಲಾದ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಕೃಷಿ ನಾಶಗೊಳಿಸಿದೆ.
ಇನ್ನು ವಾಹನ, ವಿದ್ಯುತ್ ಕಂಬ , ಮನೆಗಳಿಗೆ ಹಾನಿ ಉಂಟು ಮಾಡಿದ್ದು, ಸುಮಾರು 12 ರಷ್ಟು ಕಾಡಾನೆಗಳು ಈ ಜನವಾಸ ಪ್ರದೇಶಗಳಲ್ಲಿ ಬೀಡು ಬಿಟ್ಟಿದೆ ಎನ್ನಲಾಗಿದೆ.