ಪಡುಬಿದ್ರಿ, ಸೆ 16 (DaijiworldNews/HR): ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೂಡ್ಸ್ ಲಾರಿಯೊಂದು ಢಿಕ್ಕಿಯಾಗಿ ತಂದೆ- ಮಗ ಮೃತಪಟ್ಟಿದ್ದು, ಈ ಗೂಡ್ಸ್ ಲಾರಿಯನ್ನು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಅಪಘಾತಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ಬಾಲಕ ಸಮರ್ಥ್ ಪೋದ್ದಾರ್ (13) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದೇ ಘಟನೆಯಲ್ಲಿ ಲಾರಿಯ ಚಕ್ರ ಮೈಮೇಲೆ ಹರಿದು ಹೋಗಿದ್ದರಿಂದ ಸ್ಥಳದಲ್ಲೇ ಸಮರ್ಥ್ ತಂದೆ ಪ್ರಭಾಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇನ್ನು ಸೂರ್ಯ ಚೈತನ್ಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಸಮರ್ಥ, ರಜೆಯಲ್ಲಿ ಗಣೇಶ ಚೌತಿ ಹಬ್ಬಕ್ಕೆ ಊರಿಗೆ ತೆರಳಿದ್ದು, ತಂದೆಯೊಂದಿಗೆ ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಉಚ್ಚಿಲದಲ್ಲಿ ಇಳಿದಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿಯಾಗಿತ್ತು.
ಪರಾರಿಯಾಗಿದ್ದ ಗೂಡ್ಸ್ ಲಾರಿಯನ್ನು ಪೊಲೀಸರು ಸಿಸಿ ಟಿವಿ ಫೂಟೇಜ್ಗಳನ್ನು ಆಧರಿಸಿ ಬೆಂಬತ್ತಿ ಹೋಗಿ ಲಾರಿಯ ಚಾಲಕ, ಆರೋಪಿ ಶೇಖರ್ನನ್ನು ವಶಕ್ಕೆ ಪಡೆದಿದ್ದು, ಆತನನ್ನು ವಿಚಾರಣೆ ನಡೆಸಿದಾಗ ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಆ ಬಾಲಕ ಲಾರಿಯ ಕ್ಲೀನರ್ ಬಾಯ್ ಆಗಿದ್ದು, ಬಾಲಕನು ಯಾವುದೇ ಲಾರಿಯಾದರೂ ರಾತ್ರಿ ವೇಳೆ ಮುಂಬಯಿ ಎಕ್ಸ್ಪ್ರಸ್ ವೇನಂತಹ ಹೆದ್ದಾರಿಯಲ್ಲೂ ಸಹಿತ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ.
ಪ್ಲಾಸ್ಟಿಕ್ ಉತ್ಪಾದನೆಯ ಕಚ್ಚಾ ವಸ್ತುವನ್ನು ಗುಜರಾತ್ನಿಂದ ಹೊತ್ತು ಬರುತ್ತಿದ್ದ ಈ ಲಾರಿಯನ್ನು ಪೊಲೀಸರು ಗಂಜಿಮಠ ಪರಿಸರದಿಂದ ವಶಕ್ಕೆ ಪಡೆದುಕೊಂಡಿದ್ದು, ಚಾಲಕ ಶೇಖರ್ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.