ಕಾರ್ಕಳ, ಸೆ 15 (DaijiworldNews/DB): ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅನುಷ್ಟಾನಗೊಳಿಸುವ ಸಂದರ್ಭ ವಿಷಯ ಪ್ರಸ್ತಾಪಿಸಿದ ವ್ಯಕ್ತಿಗಳ ಹೆಸರನ್ನು ನಮೂದಿಸಿ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಲು ಅವಕಾಶವಿಲ್ಲ. ಗ್ರಾಮ ಸಭೆಯ ನಿರ್ಣಯದಂತೆ ಎಂದು ನಮೂದಿಸಿ ಸಂಬಂಧಿಸಿದವರಿಗೆ ನೋಟೀಸ್ ಜಾರಿಗೊಳಿಸಬೇಕು ಎಂದು ಉಡುಪಿ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ನಿಟ್ಟೆ ಗ್ರಾ.ಪಂ. ಪಿಡಿಒ ಅವರಿಗೆ ಸೂಚಿಸಿದ್ದಾರೆ.
ನಿಟ್ಟೆ ಗ್ರಾ.ಪಂ.ನಲ್ಲಿ ಗುರುವಾರ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸಿದ ಸಂದರ್ಭ ಗುತ್ತಿಗೆ ವಹಿಸಿದ ನಿಟ್ಟೆ ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಮೈದಾನದ ಒಂದು ಪಾರ್ಶ್ವವನ್ನು ಅಗೆದು ಹಾಕಲಾಗಿದ್ದು, ರಸ್ತೆಯಂಚಿನಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಮುಂಜಾಗೃತಾ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿತ್ತು. ಇದೀಗ ರಸ್ತೆ ಗುತ್ತಿಗೆ ವಹಿಸಿದ ಗುತ್ತಿಗೆದಾರಿಗೆ ಸೂಚಿಸುವಂತೆ ಸಿಇಒ ಆದೇಶಿಸಿದ್ದಾರೆ. ಪ್ರಾಕೃತಿಕವಿಕೋಪದಡಿ ಮರಗಳು ಬಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ತಕ್ಷಣ ಸ್ಪಂದಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ನಿಟ್ಟೆ ಅತ್ತೂರು ಚರ್ಚ್ ಬಳಿಯಿರುವ ಬಾವಿಯ ನೀರನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸುವಂತೆ ಹಾಗೂ ಪರ್ಪಲೆಯಲ್ಲಿರುವ 10.37 ಸೆಂಟ್ಸ್ ಸರಕಾರಿ ಜಾಗವನ್ನು ವಸತಿ ಯೋಜನೆ ಮೀಸಲಿಡುವಂತೆ ಗ್ರಾ.ಪಂ.ಸದಸ್ಯ ಸುಭಾಶ್ಚಂದ್ರ ಹೆಗ್ಡೆ ಒತ್ತಾಯಿಸಿದರು. ಅಲ್ಲದೆ ಅತ್ತೂರು ಚರ್ಚ್ನಿಂದ ಸರಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡದ ಕುರಿತು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ನಿರ್ಣಯ ಪುಸ್ತಕದಲ್ಲಿ ಬರೆಯಲಿಲ್ಲ!
ಗ್ರಾ.ಪಂ.ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಪಿಡಿಒ ಮಾಧವರಾವ್ ದೇಶಪಾಂಡೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕಳೆದ ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ನಿರ್ಣಯ ಪುಸ್ತಕದಲ್ಲಿ ಈ ವಿಷಯವನ್ನು ದಾಖಲಿಸಿಲ್ಲ. ಮೆಸ್ಕಾಂ ವಿಭಾಗದಲ್ಲಿ ನಡೆದ ಅವ್ಯವಹಾರವನ್ನು ದಾಖಲೆ ಸಹಿತ ಹಾಜರುಪಡಿಸಲಾಗಿದ್ದು, ಈ ಬಗ್ಗೆಯೂ ದಾಖಲೀಕರಣವಾಗಿಲ್ಲ. ವೀಡಿಯೋ ಚಿತ್ರೀಕರಣವನ್ನು ಕೂಡಾ ಎಡಿಟ್ ಮಾಡಿ ಸಾಕ್ಷಿ ನಾಶ ಮಾಡಲಾಗಿದೆ ಎಂದು ಮಂಜುನಾಥ ಶೆಟ್ಟಿ ಆರೋಪಿಸಿದರು.
ಗ್ರಾ.ಪಂ.ಸಿಬಂದಿಗಳ ವೇತನದ ಬಗ್ಗೆ ಸದಾನಂದ ಶೆಟ್ಟಿ ಮಾತನಾಡಿ, ಗ್ರಾ.ಪಂ. ತಾತ್ಕಾಲಿಕ ಸಿಬಂದಿಗಳನ್ನು ಖಾಯಂಗೊಳಿಸುವಲ್ಲಿ ಕ್ರಮ ಕೈಗೊಳ್ಳಿ ಎಂದರು.
ಕಾಪುಚಿನ್ಗೆ ಭಾರೀ ವಿರೋಧ
ನಿಟ್ಟೆ ಆಸ್ಪತ್ರೆಯ ಬಳಿ ನಿರ್ಮಾಣಗೊಂಡ ಕಾಪುಚಿನ್ ಕೌನ್ಸಿಲಿಂಗ್ ಸೆಂಟರ್ನ ವಿರುದ್ದ ಗ್ರಾಮಸಭೆ ಮತ್ತು ಜಮಾಬಂಧಿಯಲ್ಲಿ ಗ್ರಾಮಸ್ಥರಿಂದ ಭಾರೀ ಅಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಡುಪಿ ಜಿ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಪಿಡಿಒ ಅವರಿಗೆ ಸೂಚಿಸಿದ್ದಾರೆ.
ನಿಟ್ಟೆ ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರಾ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ನಿಟ್ಟೆ ಪಿಡಿಒ ಶೇಖರ್ ಮುಂತಾದವರು ಉಪಸ್ಥಿತರಿದ್ದರು.