ಬಂಟ್ವಾಳ, ಸೆ 15 (DaijiworldNews/DB): ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರ ತರಲು ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಉತ್ತಮ ಅವಕಾಶ ಕಲ್ಪಿಸಿಕೊಡುತ್ತವೆ ಎಂದು ಮಾಣಿ ಪ್ರೌಢಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿದ್ಯಾಭಿವರ್ಧಕ ಸಂಘ ಮಾಣಿ, ಕರ್ನಾಟಕ ಪ್ರೌಢಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಮಾಣಿ, ರೋಟರಿ ಕ್ಲಬ್ ಮಾಣಿ , ಲಯನ್ಸ್ ಕ್ಲಬ್ ಮಾಣಿ ಇವುಗಳ ಆಶ್ರಯದಲ್ಲಿ ಮಾಣಿಯ ಕರ್ನಾಟಕ ಪ್ರೌಢಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಪ್ರಮುಖ ವಹಿಸುತ್ತವೆ ಎಂದರು.
ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಮಾತನಾಡಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಬರಿಮಾರು, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ, ಸುಧಾ, ಸಮೂಹ ಸಂಪನ್ಮೂಲ ವ್ಯಕ್ತಿ ಮೆಡಿಲ್ಡಾ ಲೋಬೋ, ಸುಧಾಕರ ಭಟ್, ಸತೀಶ್ ರಾವ್, ಮಾಣಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಗಂಗಾಧರ್ ರೈ, ಶಾಲಾ ಸಂಚಾಲಕ ಇಬ್ರಾಹಿಂ .ಕೆ, ಉಪಾಧ್ಯಕ್ಷ ಮಹಮ್ಮದ್ ಅಬೀಬ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜತ್ತಪ್ಪ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರೇಷ್ಮಾ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಮೊದಲಾದವರು ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ.ಕೆ. ಭಂಡಾರಿ ಸ್ವಾಗತಿಸಿ, ಹಿರಿಯ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಜಯರಾಮ್ ಕಾಂಚನ ಕಾರ್ಯಕ್ರಮ ನಿರೂಪಿಸಿದರು ಪ್ರತಿಭಾ ಕಾರಂಜಿಯಲ್ಲಿ ಕಲ್ಲಡ್ಕ ವಲಯ ಮಟ್ಟದ 12 ಪ್ರೌಢಶಾಲೆ ಹಾಗೂ 13 ಉನ್ನತಿಕರಿಸಿದ ಶಾಲಾ ಮಕ್ಕಳು ಭಾಗವಹಿಸಿದ್ದರು.