ಕುಂದಾಪುರ, ಫೆ 08(SM): ಗಣರಾಜ್ಯೋತ್ಸವದ ದಿನ ರಾತ್ರಿ ಕೋಟದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಉಡುಪಿ ಜಿಲ್ಲಾ ಎಸ್ಪಿ ಹಾಗೂ ಡಿಸಿಐಬಿ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ ಪ್ರಮುಖ ಎಂಟು ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಿರುವ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ಸಂಜೆ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ವಿಚಾರಣೆಗಾಗಿ ಫೆ.೧೫ರ ತನಕ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರಕರರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರೌಡಿ ಶೀಟರ್ ಹರೀಶ್ ರೆಡ್ಡಿ, ಆತನ ಸಹೋದರನಾದ ರಾಜಶೇಖರ ರೆಡ್ಡಿ, ಪ್ರಕರಣದ ಮೊದಲು ಹಾಗೂ ನಂತರ ಹರೀಶ್ ರೆಡ್ಡಿಯ ಜೊತೆಗೆ ನಿರಂತರ ಮೊಬೈಲ್ ಸಂಪರ್ಕದಲ್ಲಿದ್ದ ಕೋಟ ಜಿಲ್ಲಾ ಪಂಚಾಯಿತಿ ಸದಸ್ಯ ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಬಾರಿಕೆರಿ, ಜಿ. ರವಿ ಯಾನೆ ಮಡಿಕಲ್ ರವಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು.
ಹರೀಶ್ ರೆಡ್ಡಿ ಸಹೋದರ ಚಂದ್ರಶೇಖರ್ ರೆಡ್ಡಿ ಹಾಗೂ ಗಣೇಶ್ ಎಂಬುವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಡಿಸಿಐಬಿ ತಂಡವು ಆರೋಪಿಗಳನ್ನು ಬಂಧಿಸಿದ ಬಳಿಕ ಆರೋಪಿಗಳ ಹೇಳಿಕೆ ಪಡೆದು ಫೆ. 8ರ ಶುಕ್ರವಾರ ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಲಾಯಿತು. ಈ ಸಂದರ್ಭ ಕೃತ್ಯಕ್ಕೆ ಬಳಸಿ ಎಸೆಯಲಾದ ತಲವಾರುಗಳನ್ನು ಬಾಳೆಬೆಟ್ಟು ತಿರುವಿನಲ್ಲಿ ಬಿಸಾಡಿದ್ದನ್ನು ಆರೋಪಿಗಳು ತೋರಿಸಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.