ಉಡುಪಿ, ಸೆ 15 (DaijiworldNews/HR): ಇಂದ್ರಾಳಿ ರೈಲ್ವೆ ಮೇಲು ಸೇತುವೆ ಮೇಲಿನ ರಸ್ತೆ ಆಭಿವೃಧ್ದಿ ಕಾಮಗಾರಿಗಳನ್ನು ಅಕ್ಟೋಬರ್ 1 ರಿಂದ ಪ್ರಾರಂಭಿಸಿ 1 ತಿಂಗಳ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಒಂದು ಬದಿಯ ರಸ್ತೆಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕೈಗೊಳ್ಳಬೇಕು. ಈ ಕಾಮಗಾರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಪೊಲೀಸ್ ಇಲಾಖೆ, ನಗರಸಭೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ನೀಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತತ್ ಕ್ಷಣದಲ್ಲಿಯೇ ತಾತ್ಕಾಲಿಕ ಸುರಕ್ಷಿತಾ ಸೌಕರ್ಯಗಳ ಕಾರ್ಯಗಳನ್ನು ಕೈಗೊಳ್ಳುವುದರಿಂದ ಮರಣ ಹೊಂದುವಂತಹ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು , ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು ಈ ಬಗ್ಗೆ ತೆಗೆದುಕೊಂಡ ಕಾರ್ಯಗಳ ಬಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಅನುಸರಣಾ ವರದಿಯನ್ನು ಒಂದು ವಾರದೊಳಗೆ ನೀಡಬೇಕೆಂದು ಸೂಚನೆ ನೀಡಿದರು.
ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದಾಗ ಅಪಘಾತದಿಂದ ದೂರವಿರಲು ಸಾಧ್ಯ, ನಿಯಮಗಳನ್ನು ಪಾಲಿಸಿದದ್ದಲ್ಲಿ ಸುರಕ್ಷಿತವಾಗಿ ಸಂಚರಿಸಲು ಅಸಾಧ್ಯವಾಗುತ್ತದೆ ಇದನ್ನು ಪ್ರತಿಯೊಬ್ಬರ ಗಮನದಲ್ಲಿರಬೇಕು ಎಂದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ , ರಾಷ್ಟ್ರೀಯ ಹೆದ್ದಾರಿ ಅಭಿಯಂತರ ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.