ಕಾರ್ಕಳ, ಸೆ 14 (DaijiworldNews/MS): ಹೂವು ಬೆಳೆಗಾರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಕಳ ತಾಲೂಕು ಹೂವು ಬೆಳೆಗಾರರ ಸಂಘವು ಸದಾ ಸಿದ್ದವಾಗಿದೆ ಎಂದು ಕಾರ್ಕಳ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಹೇಳಿದರು.
ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೂವಿನ ಬೆಳೆಗಾರರ ಸಹಕಾರ ಸಂಘದ ಆಲೋಚನೆಯು ಪ್ರಥಮವಾಗಿದ್ದು, ಸಂಘವು ಹೂವಿನ ಬೆಳೆಗಾರರ ಕಷ್ಟ, ನಷ್ಟ, ಸಂಕಷ್ಟ ಗಳನ್ನು ಸರಕಾರದ ಗಮನಕ್ಕೆ ತಂದು, ಸರಕಾರದಿಂದ ಸಿಗುವ ಸೌಲಭ್ಯ ಗಳನ್ನು ಬೆಳೆಗಾರರಿಗೆ ತಲುಪಿದಲು ಮುತುವರ್ಜಿ ವಹಿಸುತ್ತದೆ ಎಂದರು.
2021 ರ ಮಾರ್ಚ್ 17ರಂದು ಆರಂಭವಾದ ಹೂವಿನ ಬೆಳೆಗಾರರ ಸಂಘವು ಪ್ರಸ್ತುತ ಜಿಲ್ಲಾ ಮಟ್ಟದ ಮಾನ್ಯತೆಯನ್ನು ಪಡೆಯಿತು.
ಸಂಘದ ಮೂಲ ಆಶಯದಂತೆ ಹೂವಿನ ಬೆಳೆಗಾರರಿಗೆ ಸಕಾಲದಲ್ಲಿ ಹೂವಿನ ಗಿಡ ಪೂರೈಕೆ,ನಾಟಿ ಕ್ರಮ ಆರೈಕೆ, ಕಾಯಿಲೆಗೆ ಸೂಕ್ತ ಔಷಧ, ವ್ಯಾಪಾರ ವ್ಯವಹಾರದ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.ಜತೆಗೆ ಈ ಕುರಿತು ಹೂವಿನ ಬೆಳೆಗಾರರಿಗೆ ಸ್ಥಳೀಯವಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಸಂಘವು ಹೂವಿನ ಬೆಳೆಗಾರರ ಮತ್ತು ಸರಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ ಹಾಗೂ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತನ್ನು ತಮಗೆ
ದೊರಕಿಸಿಕಡಲು ಶ್ರಮಿಸುತ್ತಿದೆ ಎಂದರು.ಇದಲ್ಲದೇ ಇಂದಿನ ಮಹಾಸಭೆಯಲ್ಲಿ ಸಂಘದ ನೂತನ ವೆಬ್ ಸೈಟ್ www.flowerbank.in ಅನಾವರಣಗೊಳ್ಳಲಿದೆ.
ಬೆಳೆಗಾರರು ದೈನಂದಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಫ್ರಾನ್ಸಿಸ್ ಡಿಸೋಜ ಹೇಳಿದರು.