Karavali
ಮಂಗಳೂರು: ಗುಣಮಟ್ಟದ ಆಹಾರಕ್ಕೆ ಉತ್ತಮ ಮಾರುಕಟ್ಟೆ: ಡಾ. ಕುಮಾರ್
- Wed, Sep 14 2022 06:31:26 PM
-
ಮಂಗಳೂರು,ಸೆ 14 (DaijiworldNews/MS): ಶುಚಿ-ರುಚಿಯಿಂದ ಕೂಡಿದ ಗುಣಮಟ್ಟದ ಆಹಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸುತ್ತದೆ, ಆಹಾರೋದ್ಯಮಗಳಲ್ಲಿ ಮಹಿಳೆಯರು ಸಕ್ರಿಯರಾದಲ್ಲೀ ಅವರು ಆರ್ಥಿಕವಾಗಿ ಸ್ವಾವಲಂಭಿಗಳಾಗಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು.
ಅವರು ಸೆ.14ರ ಬುಧವಾರ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ ರಾಷ್ಟ್ರೀಯ ಗಾಮೀಣ ಜೀವನೋಪಾಯ ಅಭಿಯಾನ ಸಹಯೋಗದೊಂದಿಗೆ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಎಫ್.ಎಸ್.ಎಸ್.ಐ, ಜಿ.ಎಸ್.ಟಿ. ಮುದ್ರಾ ಮತ್ತು ಪಿ.ಎಂ.ಎಫ್.ಎಂ.ಇ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಹಾರೋದ್ಯಮವು ಕಳೆದ ಒಂದು ದಶಕದಿಂದ ಗಾಮೀಣ ಮಹಿಳೆಯರ ಜೀವನವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಗಾಮೀಣ ಮಹಿಳೆಯರನ್ನು ಸಂಜೀವಿನಿ ಸ್ವಸಹಾಯ ಗುಂಪುಗಳ ವ್ಯಾಪ್ತಿಗೆ ತರುವ ಮೂಲಕ ಅವರದ್ದೇ ಆದ ಒಕ್ಕೂಟಗಳನ್ನು ರಚಿಸಿ, ಸಾಮಥ್ರ್ಯ ಅಭಿವೃದ್ಧಿ, ಮಾಡುವ ಮೂಲಕ, ಪ್ರತಿ ಕುಟುಂಬಕ್ಕೂ ಉದ್ಯೋಗ ಕಲ್ಪಿಸಿಕೊಡಲಾಗಿದೆ, ಸಮಾಜದ ಕಟ್ಟಕಡೆಯ ಆರ್ಥಿಕ ದುರ್ಬಲ ಕುಟುಂಬದ ಮಹಿಳೆಯರು, ಅರ್ಥಿಕ ಸ್ವಾವಲಂಬನೆಯನ್ನು ಪಡೆದುಕೊಳ್ಳಲು ಕೌಶಲ್ಯ ಆಧಾರಿತ ಜ್ಞಾನ ಮತ್ತು ಬೆಂಬಲ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು ಗ್ರಾಮ ಪಂಚಾಯತ್ ಮಟ್ಟದ 223 ಹಾಗೂ ವಾರ್ಡ್ ಹಂತದ 886 ಒಕ್ಕೂಟಗಳಿವೆ, 5,806 ಸ್ವಸಹಾಯ ಗುಂಪುಗಳಿದ್ದು ಅವುಗಳಲ್ಲಿ 67,419 ಸ್ವಸಹಾಯ ಗುಂಪಿನ ಮಹಿಳೆಯರಿದ್ದಾರೆ. 125 ರೈತ ಉತ್ಪಾದಕ ಗುಂಪುಗಳಿದ್ದು, ಪ್ರತಿ ಗುಂಪಿಗೆ 1,50,000 ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ವನದನ ವಿಕಾಸ ಮೂರು ಕೇಂದ್ರಗಳಿದ್ದು ಅರಣ್ಯ ಉತ್ಪನ್ನಗಳ ಕ್ರೋಢಿಕರಣ, ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆ ಜೋಡಣೆ ಮೂಲಕ ಉತ್ಪನ್ನಗಳು ಮಾರಾಟವಾಗುತ್ತಿವೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಮುಖಾಂತರ 162 ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸಂಜೀವಿನಿಯ ಮಹಿಳೆಯರು ನಿರ್ವಹಿಸುತ್ತಿದ್ದಾರೆ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾ ನಿರ್ದೇಶಕ ಎಚ್.ಆರ್. ನಾಯ್ಕ್, ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಮಹಿಳೆಯರನ್ನು ಗುರುತಿಸಿ ಸ್ವಸಹಾಯ ಸಂಘಗಳ ಮೂಲಕ ಅವರಿಗೆ ಆರ್ಥಿಕವಾಗಿ ಹಾಗೂ ಕೌಶಲ್ಯ ತರಬೇತಿ ನೀಡುವುದರ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 134 ಮಹಿಳೆಯರು ಸ್ವಚ್ಛ ವಾಹಿನಿ ನಡೆಸಲು ಚಾಲನಾ ತರಬೇತಿ ಪಡೆದಿದ್ದಾರೆ, ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆಯಲ್ಲಿ ಫಲಾನುಭವಿಗಳಿಗೆ 4,000 ರೂ.ಗಳ ಮೂಲಧನವನ್ನು ನೀಡಲಾಗಿದೆ, ಅದನ್ನು ಪಡೆದು ಅವರು ತಮ್ಮ ಉದ್ಯಮಗಳನ್ನು ಮತ್ತಷ್ಟು ವೃದ್ಧಿಸಿದ್ದಾರೆ. ಪುಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 2,820 ಫಲಾನುಭವಿಗಳು ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಈ ಆರ್ಥಿಕ ವರ್ಷವನ್ನು ಜೀವನೋಪಾಯ ವರ್ಷ ಎಂದು ಘೋಷಿಸಿದೆ. ಆದ್ದರಿಂದ ಕೃಷಿಯೇತರ ಜೀವನೋಪಾಯ ಚಟುವಟಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಿರು ಅಹಾರ ಉದ್ಯಮಗಳನ್ನು ಗುರುತಿಸಿ ಸುಮಾರು 40 ಮಹಿಳೆಯರಿಗೆ ಎಫ್.ಎಸ್.ಎಸ್.ಎ.ಐ. (ಫುಡ್ ಸೆಫ್ಟಿ ಅಂಡ್ ಸ್ಟ್ಯಾಂಡಡ್ಸ್ ಅಥಾರಿಟಿ ಆಫ್ ಇಂಡಿಯಾ-ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪ್ರಮಾಣಪತ್ರ ನೀಡಲಾಗಿದೆ ಎಂದರು.
ಈ ಉತ್ಪನ್ನಗಳನ್ನು ಆನ್ ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಮತ್ತು ಪ್ರತಿ ಉತ್ಪನ್ನಗಳ ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಅನ್ನು ಯುಎನ್ಡಿಪಿ ಸಹಯೋಗದೊಂದಿಗೆ ಮಾಡಲಾಗುತ್ತಿದೆ, ತಾಲೂಕಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಅವರು ತಾಲೂಕು ಹಂತದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಬೆಂಬಲಿಸುವ, ಉದ್ಯಮದಾರರಿಗೆ ಬ್ಯಾಂಕ್ ಲಿಂಕೇಜ್ ಮತ್ತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆನ್ ಲೈನ್ ಮಾರುಕಟ್ಟೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದ್ದು, ಜಿಲ್ಲೆಯಿಂದ ಮೀಶೋ ಹಾಗೂ ಸಂತೆ ಕೌಶಲ್ ಕಾರ್ ಆಪ್ನಲ್ಲಿ ಹಲವಾರು ಉತ್ಪನ್ನಗಳನ್ನು ಅಪ್ ಲೋಡ್ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಗೃಹ ಉತ್ಪನ್ನ ಪ್ರದರ್ಶನ ಹಾಗೂ ಮಾರಾಟ ಮೇಳಗಳಲ್ಲಿ ಇಲ್ಲಿನ ಮಹಿಳೆಯರು ಭಾಗವಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಆಹಾರ ಖಾದ್ಯಗಳ ರುಚಿಯನ್ನು ಉಣಬಡಿಸಿದ್ದಾರೆ. ಹಲವಾರು ಮಹಿಳೆಯರು ಯಶಸ್ವಿಯಾಗಿ ಹೋಟೆಲ್ ಉದ್ಯಮ, ಕ್ಯಾಟರಿಂಗ್ ಸರ್ವಿಸ್, ಹೊಲಿಗೆ ಕೇಂದ್ರ, ಹಾಳೆ ತಟ್ಟೆ, ಅಗರಬತ್ತಿ ಉತ್ಪನ್ನಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಕೆಲಸಗಳನ್ನು ಇನ್ನು ವಿಸ್ತಾರವಾಗಿ ವಿಶೇಷ ತಂತ್ರಗಾರಿಕೆಯ ಮಾಡುವುದು ಮಾತ್ರವಲ್ಲದೆ ಈಗಾಗಲೆ ಮುಖ್ಯಮಂತ್ರಿಗಳು ಘೋಷಿಸಿದ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ತಾಲೂಕು ಹಂತದಲ್ಲಿ ಸ್ವಸಹಾಯ ಗುಂಪುಗಳ ಘಟಕಗಳನ್ನು ಗುರುತಿಸಿ ಉತ್ಪನ್ನಗಳ ಕ್ರೋಢಿಕರಣ, ಮೌಲ್ಯವರ್ಧನೆ, ಮಾರುಕಟ್ಟೆ ಜೋಡಣೆ ಮತ್ತು ವಿತರಕರಾಗಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಪಿ.ಎಂ.ಎಫ್.ಎಂ.ಇ ಯೋಜನೆಯಡಿ ನೋಂದಣಿಯಾಗಿರುವ ಹತ್ತು ಸ್ವಸಹಾಯ ಗುಂಪಿನ ಮಹಿಳೆಯರಿಗೆ ಎಫ್.ಎಸ್.ಎಸ್.ಎ.ಐ. ಪ್ರಮಾಣಪತ್ರವನ್ನು ಜಿಲ್ಲಾ ಪಂಚಾಯತ್ ನ ಸಿಇಓ ಡಾ. ಕುಮಾರ್ ಇದೇ ಸಂದರ್ಭದಲ್ಲಿ ವಿತರಿಸಿದರು.
ಕಾರ್ಯಗಾರದಲ್ಲಿ ಸಹಾಯಕ ಯೋಜನಾಧಿಕಾರಿ ಉಮೇಶ್, ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು