ಕಾರ್ಕಳ,ಸೆ 14 (DaijiworldNews/MS): ನಗರದ ಸಾಲ್ಮರ ಗ್ಯಾಲಕ್ಸಿ ಹಾಲ್ ಸಮೀಪ ಸಾರ್ವಜನಿಕ ರಸ್ತೆ ಬಳಿ ಗಾಂಜಾವನ್ನು ಪೇಪರ್ನಲ್ಲಿ ಸೇರಿಸಿ ಸಿಗರೇಟ್ ನಂತೆ ರೋಲ್ ಮಾಡಿ ಸೇದುತ್ತಿದ್ದ ಆರೋಪಿಯೊಬ್ಬನನ್ನು ನಗರ ಠಾಣೆಯ ಅಪರಾಧ ಪತ್ತೆದಳದ ಎಸೈ ದಾಮೋದರ ಕೆ.ಬಿ ಬಂಧಿಸಿದ್ದಾರೆ.
ತಾಲೂಕು ಕಛೇರಿ ಬಳಿಯ ರೋಟರಿ ಆಸ್ಪತ್ರೆ ಪರಿಸರದ ನಿವಾಸಿ ಪ್ರಕಾಶ್, (34) ಪ್ರಕರಣ ಆರೋಪಿತ.
ಸೆ.10ರ ಬೆಳಿಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸಪ್ಪೆಂಬರ್ 13ರಂದು ಪೊಲೀಸರಿಗೆ ತಲುಪಿದ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಿದಂತೆ ಆರೋಪಿಯು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು ದೃಢ ಪಟ್ಟಿದೆ.ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಗಾಂಜಾ ಸರಬರಾಜು:
ಯುವ ಸಮುದಾಯವನ್ನು ಕೇಂದ್ರೀಕರಿಸಿಕೊಂಡು ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ ಸರಬರಾಜು ಆಗುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಿಟ್ಟೆ, ಕಾಬೆಟ್ಟು, ರಾಮಸಮುದ್ರ, ಬೈಲೂರು, ಬಂಗ್ಲೆಗುಡ್ಡೆ, ಹೊಸ್ಮಾರು, ಬಜಗೋಳಿ, ಅಜೆಕಾರು. ಕುಕ್ಕುಂದೂರು ಪಳ್ಳಿ ಪರಿಸರದಲ್ಲಿ ಅವ್ಯಹತವಾಗಿ ಈ ದಂಧೆ ನಡೆಯುತ್ತಿದೆ.
ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಗಾಂಜಾ ಸರಬರಾಜು ಆಗುತ್ತಿದೆ. ಇದರಿಂದ ದಂಧೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ದಿಷ್ಟಕ್ಕಿಂತ ಹೆಚ್ಚಿನ ಹಣ ಸಂಪಾದಿಸಲು ಸಾಧ್ಯವಾಗುತ್ತಿದೆ.
ಗಾಂಜಾ ವಿಚಾರದಲ್ಲಿ ಕೆಲವೊಂದು ಅಹಿತಕರ ಘಟನೆಯೂ ನಡೆಯುತ್ತಿದೆ. ಗಾಂಜಾ ಸೇವನೆ ಮಾಡುವವರ ವಿರುದ್ಧ ಪೊಲೀಸರು ಅಲ್ಲಲ್ಲಿ ಕೇಸುದಾಖಲಿಸುತ್ತಿದ್ದರೂ, ಗಾಂಜಾ ಸರಬರಾಜು ಮಾಡುವ ಸೂತ್ರಧಾರಿಗಳ ಪತ್ತೆ ಹಚ್ಚಲು ಇದು ವರೆಗೆ ಸಾಧ್ಯವಾಗದೇ ಇರುವುದರಿಂದ ಗಾಂಜಾ ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿರಲು ಕಾರಣವಾಗಿದೆ.