ಮಂಗಳೂರು, ಸೆ 14 (DaijiworldNews/DB): ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂವರೆ ದಶಕಗಳ ಬಳಿಕ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಆರೆನಹಳ್ಳಿ ನಿವಾಸಿ ಅಸ್ಲಾಂ ಆಲಿಯಾಸ್ ಅಸ್ಲಾಂ ಪಾಷಾ (65) ಬಂಧಿತ ಆರೋಪಿ. ಅಂಬಾಸಿಡರ್ ಕಾರು ಕಳವು ಮಾಡಿದ ಆರೋಪದಡಿ ಈತನ ವಿರುದ್ದ1997ರ ನ. 11ರಂದು ಪ್ರಕರಣ ದಾಖಲಾಗಿತ್ತು. ಆದರೆ ಆತ ಪತ್ತೆಯಾಗಿರಲಿಲ್ಲ. ಆದರೆ ಇದೇ ವೇಳೆ ಮೈಸೂರಿನಲ್ಲಿ ಆತನ ವಿರುದ್ದ ಕಳವು ಪ್ರಕರಣವಿದ್ದ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಆತನನ್ನು ಬಂಧಿಸಿದ್ದರು. ಆತ ಮೈಸೂರು ಜೈಲಿನಲ್ಲಿದ್ದ ವೇಳೆ ಎರಡು ಬಾರಿ ಮಂಗಳೂರು ಪೊಲೀಸರು ಆತನ ವಿರುದ್ದ ಬಾಡಿ ವಾರೆಂಟ್ ಹೊರಡಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೈಸೂರು ಜೈಲಿನಲ್ಲಿದ್ದ ಆತ ಕೆಲ ಸಮಯದ ಬಳಿಕ ಬಿಡುಗಡೆಗೊಂಡು ಜೈಲಿನಿಂದ ಹೊರ ಬಂದಿದ್ದ. ಆದರೆ ಮಂಗಳೂರಿನಲ್ಲಿ ಆತನ ವಿರುದ್ದ ಪ್ರಕರಣ ಹಾಗೆಯೇ ಉಳಿದಿತ್ತು. ಹಾಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಹಾಚರಣೆ ನಡೆಸಿ ಕಳೆದ ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ದಕ್ಷಿಣ ಠಾಣೆಯ ಹೆಡ್ ಕಾನ್ಸ್ಟೆಬಲ್ ಪುಟ್ಟರಾಮ ಹಾಗೂ ಕಾನ್ಸ್ಟೆಬಲ್ ರವಿಕುಮಾರ್ ಅವರ ವಿಶೇಷ ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣದಲ್ಲಿ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಪತ್ನಿ, ಅತ್ತೆ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ ಈತ ಪೊಲೀಸರಿಗೆ ಸುಳ್ಳು ವಿಳಾಸ ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದ. ಪೀಣ್ಯ, ಬೆಂಗಳೂರಿನ ನಿವಾಸಿಯೆಂದು ಸುಳ್ಳು ಹೇಳಿದ್ದ. ಆರು ಅಂಬಾಸಿಡರ್ ಕಾರು, ಎಂಟು ಬೈಕ್ಗಳನ್ನು ಕದ್ದ ಬಗ್ಗೆ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅತ್ತಾವರ, ಬಾಬುಗುಡ್ಡೆ, ಕೊಡಿಯಾಲಬೈಲ್, ಎಮ್ಮೆಕೆರೆ, ಬೆಂಗಳೂರು ಜೆಪಿ ನಗರ, ಮೈಸೂರು ವಿಶ್ವೇಶ್ವರನಗರ, ಕೆ.ಆರ್.ಆಸ್ಪತ್ರೆ ಬಳಿ ಮುಂತಾದೆಡೆ ಕಾರುಗಳನ್ನು ಹಾಗೂ ಮೈಸೂರು ಕುಕ್ರಳ್ಳಿ ಕೆರೆ, ವಿಜಯನಗರ, ಬೆಂಗಳೂರು ಮೊದಲಾದೆಡೆ 8ಕ್ಕೂ ಅಧಿಕ ಬೈಕ್ಗಳನ್ನು ಕಳವು ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.