ಕಾರ್ಕಳ, ಸೆ 14 (DaijiworldNews/DB): ಪ್ರಗತಿಪರ ಕೃಷಿಕರೋರ್ವರು ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ದುರ್ಗ ಗ್ರಾಮದ ತೆಳ್ಳಾರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾರ್ಕಳ ಪ್ರಗತಿಪರ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63 ) ಅವರು ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋಗಿದ್ದಾಗ ಭಾಸ್ಕರ ಹೆಗ್ಡೆಯವರು ಗುಂಡು ಹೊಡೆದುಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಪತ್ನಿ ಹೊರಗೋಡಿ ಬಂದಾಗ ಕೃತ್ಯ ಎಸಗಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗುತ್ತಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ವೃತ್ತ ನಿರೀಕ್ಷಕ ಸಂಪತ್, ಡಿವೈಎಸ್ಪಿ ವಿನಯಪ್ರಸಾದ್ ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮೃತರು ಸಾವಯವ ಕೃಷಿಕರಾಗಿ ಗಮನ ಸೆಳೆದಿದ್ದರು. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿದ್ದರು. ದುರ್ಗಾ ಪಂಚಾಯತ್ ನ ಸದಸ್ಯರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821