ಮಲ್ಪೆ, ಫೆ 8(MSP): ಸೋನಾನ್ ತಂತ್ರಜ್ಞಾನದಲ್ಲಿ ಕಂಡುಬಂದ ವಸ್ತು ಬೋಟ್ ಅವಶೇಷವಲ್ಲ ಅದು ಸಮುದ್ರಾಳದ ಕಲ್ಲು ಎಂದು ಖಚಿತ ಮೂಲಗಳು ಹೇಳಿವೆ.
ನೌಕಾಪಡೆ ಯುದ್ಧ ಹಡಗು ಬಳಸಿ ಸೋನಾರ್ ತಂತ್ರಜ್ಞಾನದ ಮೂಲಕ 23 ಮೀಟರ್ ಅವಶೇಷ ಪತ್ತೆ ಹಚ್ಚಲಾಗಿದೆ ಎಂದು ವರದಿಯಾಗಿತ್ತು. ಆದರೆ ಇದು ಅವಶೇಷವಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಮುದ್ರದ 60 ಮೀಟರ್ಗೂ ಹೆಚ್ಚಿನ ಆಳದಲ್ಲಿ 23 ಮೀಟರ್ ಉದ್ದ ವಸ್ತು ಪತ್ತೆಯಾಗಿತ್ತು. ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ನ ಉದ್ದವೂ ಹೆಚ್ಚು ಕಡಿಮೆ ಇಷ್ಟೇ ಇದ್ದುದರಿಂದ (24 ಮೀಟರ್) ಅದೇ ಬೋಟ್ನ ಅವಶೇಷ ಆಗಿರಬಹುದು ಎಂದು ಶಂಕಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ತ್ರೀಡಿ ಮ್ಯಾಪಿಂಗ್, ಮುಳುಗು ತಜ್ಞರಿಂದ ಶೋಧ ನಡೆದಿತ್ತು. ಆದರೆ ಅಂತಿಮವಾಗಿ ಇದು ಕಲ್ಲು ಎಂದು ತಿಳಿದು ಬಂದಿದೆ.
ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ನೌಕಾಪಡೆ ವರದಿ ಬರುವವರೆಗೆ ನಾವು ಏನು ಹೇಳುವಂತಿಲ್ಲ ಎಂದು ತಿಳಿಸಿದ್ದಾರೆ.
ಕ್ಯಾಬಿನ್ ಕೂಡ ಅಲ್ಲ:
ಮಹಾರಾಷ್ಟ್ರದ ರತ್ನಗಿರಿ ಸಮೀಪದ ಕಡಲಲ್ಲಿ ಬೋಟ್ ಒಂದರ ಕ್ಯಾಬಿನ್ ತೇಲುತ್ತಿರುವುದನ್ನು ಬೇಲೆಕೇರಿ ಮೀನುಗಾರರು ಗುರುತಿಸಿ ಫೋಟೊ ತೆಗೆದಿದ್ದಾರೆ. ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳಾಗಿರಬಹುದೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಕ್ಯಾಬಿನ್ ಸುವರ್ಣ ತ್ರಿಭುಜದ್ದಲ್ಲ ಎಂದು ಮೀನುಗಾರರ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ನೀಡದಿದ್ದರೆ ಹೋರಾಟ:
ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿ 54 ದಿನ ಕಳೆದರೂ ಯಾವುದೇ ಮಹತ್ವದ ಸುಳಿವು ಇದುವರೆಗೆ ಲಭ್ಯವಾಗಿಲ್ಲ. ನಾಪತ್ತೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಮೀನುಗಾರರ ಮನೆಯವರು ಗುರುವಾರ ಉ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಸರ್ಕಾರ ಒಟ್ಟಾರೆ ಪ್ರಕರಣದ ಚಿತ್ರಣ ನೀಡಲು ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಜಿ ನೇತೃತ್ವದಲ್ಲಿ ಸಮಿತಿಯಾಗಿ ಪ್ರಕರಣ ತನಿಖೆ ನಡೆಯುತ್ತಿದೆ, ನೌಕಾಪಡೆಯು ತನ್ನ ಕಾರ್ಯಾಚರಣೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮೀನುಗಾರರಿಗೆ ತಿಳಿಸಿದ್ದಾರೆ.
ರಾಜ್ಯ, ಕೇಂದ್ರ ಸರ್ಕಾರಗಳು ತಮ್ಮಲ್ಲಿರುವ ತಂತ್ರಜ್ಞಾನಗಳ ಬಗ್ಗೆ ಹೇಳಿಕೊಳ್ಳುತ್ತವೆ. ಆದರೆ ಒಂದು ಬೋಟ್ ನಾಪತ್ತೆಯಾಗಿರುವುದು ಪತ್ತೆ ಮಾಡಲು ಸಾಧ್ಯವಿಲ್ಲ ಎಂದರೆ ಇದಕ್ಕೆ ಅರ್ಥವೇನು ಎಂದು ನಾಪತ್ತೆಯಾದ ಚಂದ್ರಶೇಖರ್ ಅವರ ಸಹೋದರ ನಿತ್ಯಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಪೆ, ಉ.ಕ ಮೀನುಗಾರರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಸಮರ್ಪಕ ಕಾರ್ಯಾಚರಣೆ, ಮತ್ತು ಪ್ರಕರಣದ ಮಾಹಿತಿ ನೀಡದೆ ಹೋದಲ್ಲಿ ಮತ್ತೊಂದು ಹೋರಾಟಕ್ಕೆ ಅಣಿಯಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.