ಮಂಗಳೂರು, ಸೆ 13 (DaijiworldNews/SM): ಮಂಗಳೂರು ನಗರ ಹೊರವಲಯದ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಗಡುವಿನೊಳಗೆ ತೆರವು ಆಗಬೇಕು. ಒಂದು ವೇಳೆ ತೆರವು ಆಗದಿದ್ದರೆ ಅಕ್ಟೋಬರ್ 18ರಂದು ನಾಗರಿಕರೇ ಟೋಲ್ ಒಡೆಯುತ್ತಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆಯನ್ನು ನೀಡಿದೆ.
ಮಂಗಳೂರು ನಗರದ ಸುರತ್ಕಲ್ ಎನ್ಐಟಿಕೆಯ ಅಕ್ರಮ ಟೋಲ್ಗೇಟ್ ತೆರವು ದಿನಾಂಕವನ್ನು ಘೋಷಿಸಲು ಒತ್ತಾಯಿಸುವಂತೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಧರಣಿ ನಡೆಸಿದೆ. ಸುರತ್ಕಲ್ ಎನ್ಐಟಿಕೆ ಟೋಲ್ ತೆರವು ಮಾಡುವ ಅಂತಿಮ ದಿನಾಂಕವನ್ನು ಪ್ರಕಟಣೆ ಮಾಡಿ ಎಂಬುದು ಈ ಧರಣಿಯ ಬೇಡಿಕೆ ಆಗಿದೆ. ದೀಪಾವಳಿ ಹಾಗೂ ದಸರಾ ಹಬ್ಬವನ್ನು ಗಮನಿಸಿ ಅಕ್ಟೋಬರ್ 18ರ ಒಳಗೆ ಈ ಟೋಲ್ ಗೇಟ್ ಮುಚ್ಚದಿದ್ದರೆ, ಟೋಲ್ಗೇಟ್ ವಿರೋಧಿ ಸಮಿತಿ, ಸಮನ ಮನಸ್ಕ ನಾಗರಿಕರು ಸೇರಿ ಮುತ್ತಿಗೆ ಹಾಕಿ ಜನರೇ ತೆರವು ಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಹಾಗೂ ಜನರೇ ಸ್ವಯಂ ಪ್ರೇರಿತರಾಗಿ ಟೋಲ್ ಒಡೆದು ಜೈಲ್ ಭರೋ ಆಗೋವುದಾಗಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸಂಜೆ 5 ಗಂಟೆಯವರೆಗೆ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿದ್ದರು. ಈ ವೇಳೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಮನವಿಯನ್ನು ಸ್ವೀಕರಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಮಾತನಾಡಿ, ಟೋಲ್ ಗೇಟ್ನ ತೆರವಿನ ಬಗ್ಗೆ ಪೇಪರ್ ವರ್ಕ್ ನಡೆಯುತ್ತಿದೆ. 20 ದಿನಗಳಿಂದ ಗರಿಷ್ಠ ಒಂದು ತಿಂಗಳೊಳಗೆ ಸುರತ್ಕಲ್ ಟೋಲ್ ತೆರವು ಆಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ತೆರವು ಮಾಡುವ ನಿರ್ದಿಷ್ಟ ದಿನಾಂಕವನ್ನು ಘೋಷಣೆ ಮಾಡಿಲ್ಲ ಎಂದರು.
ನಂತರ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಮಾತನಾಡಿ, ಟೋಲ್ಗೇಟ್ ತೆರವಿನ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಲು ಹೆದ್ದಾರಿ ಪ್ರಾಧಿಕಾರ ಸಿದ್ಧವಿಲ್ಲ. ಆದರೆ ತಿಂಗಳೊಳಗೆ ಟೋಲ್ ಗೇಟ್ ಅನ್ನು ತೆರವುಗೊಳಿಸುತ್ತಾರೆ ಎನ್ನುವ ಭರವಸೆ ನೀಡುತ್ತಿದ್ದೀರಿ. ಆದರೆ ನಾವೂ ಯಾವ ಭರವಸೆಯನ್ನು ನಂಬುವುದಿಲ್ಲ. ಆದ್ದರಿಂದ ಗಡುವಿನೊಳಗೆ ಟೋಲ್ ತೆರವು ಆಗದಿದ್ದಲ್ಲಿ ಅಕ್ಟೋಬರ್ 18 ರಂದು ನೂರಾರು ಸಂಘಟನೆಗಳ ಸಾವಿರಾರು ಜನರು ಅಕ್ರಮ ಟೋಲ್ ಗೇಟ್ ತೆರವು ಮಾಡಿಸಿಯೇ ತೀರುತ್ತಾರೆ ಎಂದು ಎಚ್ಚರಿಕೆ ನೀಡಿದರು.