ಬಂಟ್ವಾಳ, ಸೆ 13 (DaijiworldNews/DB): ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನ ಮಂದಿರದಲ್ಲಿ 21ನೇ ವರ್ಷದ ನವದಂಪತಿ ಸಮಾವೇಶವು ಭಾನುವಾರ ನಡೆಯಿತು.
ಹಿರಿಯ ದಂಪತಿಗಳಾಗಿ ಭಾಗವಹಿಸಿದ ಕೆ. ವಿಠಲ ಶೆಟ್ಟಿ ಹಾಗೂ ಪ್ರೇಮ ಅವರು ಸಮಾವೇಶ ಉದ್ಘಾಟಿಸಿ ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ಹಂಚಿಕೊಂಡರು. ಬಳಿಕ ರಾಷ್ಟ್ರದ ಬಗ್ಗೆ ಜಾಗೃತಿ ಮೂಡಿಸಬೇಕು. ಧರ್ಮವನ್ನು ಬಿಡಬಾರದು. ಮುಂದಿನ ಪೀಳಿಗೆಯನ್ನು ಚೆನ್ನಾಗಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, 16 ಸಂಸ್ಕಾರದಲ್ಲಿ ಮದುವೆ ಒಂದು ಉತ್ತಮವಾದ ಸಂಸ್ಕಾರ. ಪರಸ್ಪರ ನಂಬಿಕೆ ಮತ್ತು ಜೀವನ ನಮ್ಮನ್ನು ಒಂದಾಗಿಸುತ್ತದೆ. ಒಟ್ಟಾಗಿ ಬದುಕುವಂತಹ ಸಾಮರಸ್ಯದ ಜೀವನವೇ ಮದುವೆ ಎಂದರು.
ಕುಟುಂಬ ಪ್ರಭೋದನ್ ಪ್ರಮುಖರಾದ ಗಜಾನನ ಪೈಯವರು ಮಾತನಾಡಿ, ಎರಡು ಕುಟುಂಬಗಳು ಬೇರೆ ಬೇರೆಯಾಗಿದ್ದರೂ ಅದನ್ನು ಒಟ್ಟಾಗಿನಡೆಸಿಕೊಂಡು ಹೋಗುವುದು ಹಾಗೂ ಸಂತತಿಯನ್ನು ಪಡೆದು ಸಂಸ್ಕಾರಯುತವನ್ನಾಗಿ ಬೆಳೆಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಪ್ರತಿಪಾದಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ . ರಾಮಣ್ಣ ಅವರು, ತಮ್ಮ ಕುಟುಂಬವನ್ನು ಚೈತನ್ಯಶೀಲವನ್ನಾಗಿ ಮಾಡಲು ಮಾನಸಿಕವಾಗಿ ನಾವು ಸಿದ್ದರಾಗಾಬೇಕು ಮತ್ತು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ರಾಷ್ಟ್ರವು ಸಮರ್ಥ ಹಾಗೂ ಸದೃಢವಾಗುತ್ತದೆ ಎಂದರು.
ಆಗಮಿಸಿದ ಎಲ್ಲಾ ನವದಂಪತಿಗೆ ಮಾತೆಯರು ಕಾಲಿಗೆ ನೀರು ಹಾಕಿ ತೊಳೆದು, ಆರತಿ ಬೆಳಗಿ, ಅರಶಿನ, ಕುಂಕುಮ ಹಚ್ಚಿ ಸ್ವಾಗತಿಸಿದರು. ಎಲ್ಲಾ ನವದಂಪತಿಗಳು ಘೃತಾಹುತಿ ಅರ್ಪಿಸಿ ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ಸಭಾಂಗಣ ಪ್ರವೇಶಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್ ಎನ್., ಡಾ. ಕಮಲಾ ಪ್ರಭಾಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಒಟ್ಟು 104 ಜೋಡಿ ದಂಪತಿಗಳು ಉಪಸ್ಥಿತರಿದ್ದರು. ದಿವ್ಯಾ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಮಂಜುಳಾ ನಿರೂಪಿಸಿದರು.