ಉಡುಪಿ, ಸೆ 13 (DaijiworldNews/HR): ಬಿಜೆಪಿಯವರಿಗೆ ಜನಸ್ಪಂದನೇ ಅಭಿವೃದ್ಧಿಯ ಬಗ್ಗೆ ನಂಬಿಕೆ ಇಲ್ಲ, ಅವರಿಗೆ ಲಂಚ ಮತ್ತು ಮಂಚದಲ್ಲಿ ಹೆಚ್ಚಿನ ಆಸಕ್ತಿ ಇದೆ, ದೇಶವನ್ನು ಒಗ್ಗೂಡಿಸುವ ವಿಚಾರದಲ್ಲಿ ಚಿಂತನೆ ಇಲ್ಲ, ದೇಶವನ್ನು ತುಂಡು ತುಂಡು ಮಾಡಿ ಅದರ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಆಸಕ್ತಿ ಹೆಚ್ಚು. ಭಾರತ್ ಜೋಡೋ ಕಾರ್ಯಕ್ರಮ ಭಾರತೀಯರನ್ನು ಒಗ್ಗೂಡಿಸುವುದಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.
ರಾಹುಲ್ ಗಾಂಧಿಯ ಟಿ ಶರ್ಟ್ ವಿಚಾರಕ್ಕೆ ಬಿಜೆಪಿ ಟೀಕಿದ ಕುರಿತು ಪ್ರತಿಕ್ರಿಯಿಸಿದ ಐವನ್, ರಾಹುಲ್ ಗಾಂಧಿಯವರಿಗೆ 41,000 ಮೌಲ್ಯದ ಟಿ-ಶರ್ಟ್ ಧರಿಸುವುದು ದೊಡ್ಡ ವಿಚಾರವೇ ಅಲ್ಲ. ಅವರಿಗೆ ಇಷ್ಟವಾದ ಬಟ್ಟೆ ಧರಿಸಿ ಇಷ್ಟವಾದ ಆಹಾರ ಕ್ರಮ ಪಾಲಿಸುವ ಅಧಿಕಾರ ಭಾರತದ ಸಂವಿಧಾನ ನೀಡಿದೆ. ತಾವು ಏನು ಮಾಡಬೇಕು ಯಾವ ರೀತಿ ಶಿಕ್ಷಣ ಪಡೆಯಬೇಕು. ಯಾರನ್ನ ಮದುವೆಯಾಗಬೇಕು ಎನ್ನುವುದು ಫಂಡಮೆಂಟಲ್ ರೈಟ್ಸ್. ರೂ.50 ಟೀ ಶರ್ಟ್ ಧರಿಸಿದಾಗ ನೀವು ಕೇಳಲಿಲ್ಲ, 40 ರೂಪಾಯಿ ಟಿ-ಶರ್ಟ್ ಹಾಕಿದಾಗ ನೀವು ಕೇಳಲಿಲ್ಲ. ಹಾಗಾಗಿ ಟಿ-ಶರ್ಟ್ ಅವರು ಯಾವುದೇ ಆಗಲಿ ಅದು ಅವರ ಕಂಫರ್ಟ್ ಗೆ. ಅವರು ನಡೆದು ಸಾಗುವಾಗ ಯಾವ ಶೂ ಧರಿಸಬೇಕು, ಯಾವ ಟೀ ಶರ್ಟ್ ಧರಿಸಬೇಕು ಅದು ಅವರಿಗೆ ಬಿಟ್ಟಂತ ವಿಚಾರ ಎಂದರು.
ಇನ್ನು ರಾಹುಲ್ ಗಾಂಧಿಯವರ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೀವು ಮೋದಿಯವರನ್ನು ಯಾಕೆ ಪ್ರಶ್ನಿಸಲ್ಲ. ಮೋದಿಯವರು 10 ಲಕ್ಷ ರೂಪಾಯಿಯ ಸೂಟನ್ನ ಧರಿಸಿದ್ರಲ್ಲ, ಅದರ ಬಗ್ಗೆ ನೀವು ಪ್ರಶ್ನೆ ಮಾಡಿ. ಅದನ್ನು ಯಾಕೆ ಏಲಂ ಮಾಡಿದಿರಿ? ಅಂದರೆ ನೀವು ಅದನ್ನು ಧರಿಸಿ ಸಾರ್ವಜನಿಕ ರ ಟೀಕೆಗೆ ಒಳಗಾಗಿ ಆಮೇಲೆ ಏಲಂ ಮಾಡಿದ್ದೀರಿ. ಹಾಗಾಗಿ ನಿಮಗೆ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುವ ನೈಕತಿಕತೆ ಇಲ್ಲ. ರಾಹುಲ್ ಗಾಂಧಿಯವರು ಅವರಿಗಿಷ್ಟವಾದ ಟಿ-ಶರ್ಟ್ ಪ್ಯಾಂಟ್ ಧರಿಸುತ್ತಾರೆ ಅವರಿಗೆ ಇಷ್ಟವಾದ ಊಟ ಮಾಡುತ್ತಾರೆ. ಇದೆಲ್ಲ ಅವರ ವೈಯಕ್ತಿಕ ವಿಚಾರ, ಅವರು ಫಂಡಮೆಂಟಲ್ ರೈಟ್ಸ್ ನ ಒಳಗಡೆ ಇದ್ದಾರೆ ಹೊರತು ಅದರನ್ನು ಯಾವತ್ತು ಮೀರಿಲ್ಲ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರಿಗೂ ಕೂಡ ವ್ಯಕ್ತಿಗತವಾಗಿ ಮಾತನಾಡಿದವರಲ್ಲ. ಆದರೆ ವಿಚಾರಗಳು ಬಂದಾಗ ಏನೇಲ್ಲ ಸಮಾಜದ ನಡೆಯುತ್ತಿದೆ, ಯಾರು ಯಾವ ರೀತಿಯಲ್ಲಿ ಕರೆಸಿಕೊಳ್ಳುತ್ತಾರೆ ಎನ್ನುವುದನ್ನು ಉಲ್ಲೇಖಿಸುತ್ತಾರೆ. ನನ್ನ ಅಭಿಪ್ರಾಯದ ಪ್ರಕಾರ ಸಿಟಿ ರವಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಯಾವುದೇ ಯೋಗ್ಯತೆ ಉಳಿಸಿಕೊಂಡಿಲ್ಲ. ಸಿದ್ದರಾಮಯ್ಯ ಅವರ ತತ್ವ ಸಿದ್ಧಾಂತಗಳು ಅವರು ರಾಜ್ಯವನ್ನು ನಡೆಸಿದ ರೀತಿ ಅದು ಅತ್ಯುತ್ತಮವಾಗಿರುವಂಥದ್ದು. ಈ ವಿಚಾರ ಸಿಟಿ ರವಿ ಅವರಿಗೆ ಗೊತ್ತು, ಹಾಗಾಗಿ ಸಿಟಿ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಸಿಟಿ ರವಿ ಅವರಿಗೆ ಲೂಟಿ ರವಿ ಎಂದು ಸಿದ್ದರಾಮಯ್ಯನವರು ಹೇಳಿದ್ದಲ್ಲ ಜನ ಮಾತನಾಡುತ್ತಿರುವುದನ್ನು ಉಲ್ಲೇಖ ಮಾಡಿರುವುದು ಅಷ್ಟೆ. ಜನ ಹೀಗೆ ಮಾತನಾಡುತ್ತಾರಲ್ಲ ಎಂದು ಪಾಪಪ್ರಜ್ಞೆಯಿಂದ ಸಿದ್ದರಾಮಯ್ಯನವರು ಈ ರೀತಿ ಮಾತನಾಡಿದ್ದಾರೆ ಅಷ್ಟೆ ಎಂದಿದ್ದಾರೆ.
ಇವತ್ತು ದೇಶದಲ್ಲಿ ಶ್ರೀಮಂತ ಬಡವ ಎನ್ನುವ ಎರಡು ವಿಭಾಗಗಳನ್ನಾಗಿಸಲು ಬಿಜೆಪಿಯವರು ಹೊರಟಿದ್ದಾರೆ. ಇದನ್ನು ವಿರೋಧಿಸಿ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರವರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದವನ್ನು ಸವೆಸಿ ನಮ್ಮ ಯಾತ್ರೆಯೇ ಹೊರತು, ಅಡ್ಡವಾಣಿಯವರಂತೆ ಕಾರಿನಲ್ಲಿ ಕುಳಿತು ಆರಾಮದ ರಥಯಾತ್ರೆಯಲ್ಲ. ಪಾದಯಾತ್ರೆಗೆ ವಿಶೇಷವಾದ ಅರ್ಥವಿದೆ, ಇದು ಗಾಂಧೀಜಿಯವರು ಹಾಕಿಕೊಟ್ಟ ತತ್ವದ ಮೇಲೆ ಆಧಾರವಾಗಿದೆ. ಪಾದಯಾತ್ರೆಯ ಬಗ್ಗೆ ಜನರ ತೋರಿಸುತ್ತಿರುವ ಬೆಂಬಲ ಆಸಕ್ತಿಯನ್ನು ನೋಡಿದರೆ ಇದೊಂದು ಯಶಸ್ವಿ ಕಾರ್ಯಕ್ರಮ ಎಂದು ಹೇಳಿದ್ದಾರೆ.